ಹೊಸಬರಿಗೆ ಅವಕಾಶ ಕೊಟ್ಟರೂ ಮಾನಸಿಕವಾಗಿ ಸಿದ್ಧ: ಶಾಸಕ ರಘುಪತಿ ಭಟ್

ರಘುಪತಿ ಭಟ್
ಉಡುಪಿ : ಬಿಜೆಪಿಯಲ್ಲಿ ಹೊಸಬರಿಗೆ ಅವಕಾಶ ಹೊಸತಲ್ಲ. ನಾವು ಎಲ್ಲದಕ್ಕೂ ಮಾನಸಿಕವಾಗಿ ತಯಾರಾಗಿಯೇ ಇದ್ದೇವೆ. ನನ್ನನ್ನು ಬಿಟ್ಟು ಬೇರೆಯವರಿಗೆ ಅವಕಾಶ ಕೊಟ್ಟರೂ ನಾನು ಅದಕ್ಕೆ ಮಾನಸಿಕವಾಗಿ ತಯಾರಿದ್ದೇನೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಬಿಜೆಪಿಯಲ್ಲಿ ಹೊಸತನದ ಕುರಿತು ಬಿ.ಎಲ್.ಸಂತೋಷ್ ನೀಡಿರುವ ಹೇಳಿಕೆ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಅವರು ಉಡುಪಿಯಲ್ಲಿ ಶುಕ್ರವಾರ ಈ ರೀತಿ ಪ್ರತಿಕ್ರಿಯಿಸಿದರು.
ಮಾನಸಿಕವಾಗಿ ಸಿದ್ಧರಾಗಿ ಎಂಬುದು ನಮ್ಮ ಸಂಘಟನೆಯ ತತ್ವವಾಗಿದೆ. ಪಕ್ಷದ ಹಿರಿಯರು ನಿಶ್ಚಯ ಮಾಡಿದಂತೆ ಬಿಜೆಪಿಯಲ್ಲಿ ನಡೆಯುತ್ತದೆ. ಬೇಕು ಅಂತ ಕೇಳಲಿಕ್ಕೆ ಇಲ್ಲ, ಬೇಡ ಅಂತ ಹೇಳಲಿಕ್ಕೆ ಇಲ್ಲ ಎಂದರು.
ನಾನು ಹೊಸಬನೂ ಅಲ್ಲ ಹಳಬನೂ ಅಲ್ಲ. ನಾನು ಮಧ್ಯದಲ್ಲಿ ಇರುವ ಶಾಸಕ. ನನಗಿಂತ ಬಾಹಳಷ್ಟು ಹಳಬ ಶಾಸಕರಿದ್ದಾರೆ. ಬಿಜೆಪಿಯಲ್ಲಿ ೫-೬ ಬಾರಿ ಗೆದ್ದವರಿದ್ದಾರೆ. ಬಿಜೆಪಿಯಲ್ಲಿ ಯಾವತ್ತು ಹೊಸತನ ಇದ್ದೇ ಇದೆ. ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ. ಆಂತರಿಕ ಚರ್ಚೆ ನಡೆಯುತ್ತದೆ. ಜನಾಭಿಪ್ರಾಯ ಸಂಗ್ರಹಿ ಸುವ ವ್ಯವಸ್ಥೆಗಳು ನಮ್ಮ ಪಕ್ಷದಲ್ಲಿ ಇದೆ ಎಂದು ಅವರು ತಿಳಿಸಿದರು.
ಜನರ ಜೊತೆ ಇದ್ದ ಶಾಸಕರಿಗೆ ಸಮಸ್ಯೆ ಆಗುವುದಿಲ್ಲ.ಹೊಸಬರು ಬಂದರೆ ಹೊಸ ನಾಯಕತ್ವ ಸೃಷ್ಟಿಯಾಗುತ್ತದೆ ಎಂದ ಅವರು, ೨೦೦೪ರಲ್ಲಿ ಹೊಸಬನಾಗಿದ್ದ ನನಗೆ ಅವಕಾಶ ಕೊಟ್ಟರು. ೨೦೧೩ರಲ್ಲಿ ಮತ್ತೊಬ್ಬ ಅಭ್ಯರ್ಥಿ ಆಯ್ಕೆಯಾದಾಗ ನಾನು ಅವರಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ. ಪಕ್ಷಕ್ಕೋಸ್ಕರ ಕೆಲಸ ಮಾಡುವ ಸ್ವಭಾವವನ್ನು ಇಟ್ಟುಕೊಂಡಿದ್ದೇನೆ ಎಂದರು.
ಮಸೀದಿ ಎದುರು ಬೇಡ
ಸರಕಾರದ ಭಜನಾ ಅಭಿಯಾನದ ಎಚ್ಚರಿಕೆ ನೀಡಿರುವ ಶ್ರೀರಾಮಸೇನೆ ಮಸೀದಿಯ ಎದುರು ಹೋಗಿ ಭಜನೆ ಮಾಡಿದರೆ ಸಂಘರ್ಷ ಆಗಬಹುದು. ಆಝಾನ್ ಕುರಿತಾಗಿ ಸರಕಾರ ಮತ್ತು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಯಾಗಬೇಕು. ಶ್ರೀರಾಮಸೇನೆ ನಮ್ಮ ಪರಿವಾರ ಸಂಘಟನೆ ಅಲ್ಲ. ಅವರ ಕಾರ್ಯಕ್ರಮಕ್ಕೆ ನಾನು ಏನು ಮಾಡಲು ಆಗುವುದಿಲ್ಲ. ದೇವಸ್ಥಾನದಲ್ಲಿ ಭಜನೆ ಮಾಡುವುದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದು ಶಾಸಕರು ಹೇಳಿದರು.
ಉಡುಪಿಯಲ್ಲಿ ಆಝಾನ್ ಶಬ್ದ ಕಡಿಮೆಯಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರ ಗಳು ಹಾರ್ನ್ ಮೈಕ್ಗಳನ್ನು ಕೆಳಗೆ ಇಳಿಸುವುದು ಉತ್ತಮ. ಅದರ ಬದಲು ಸ್ಪೀಕರ್ ಬಾಕ್ಸ್ ಬಳಸಬೇಕು. ಧರ್ಮಕೇಂದ್ರದ ಸುತ್ತ ಬಂದವರಿಗೆ ಕೇಳಿದರೆ ಸಾಕು. ಇಡೀ ಊರಿಗೆ ಕೇಳಬೇಕಾಗಿಲ್ಲ ಎಂದರು.
ದೇವಸ್ಥಾನದ ಸುಪ್ರಭಾತಕ್ಕೆ ಸಾರ್ವಜನಿಕರಿಂದ ಆಕ್ಷೇಪಗಳು ಇವೆ. ದೇವಸ್ಥಾನ, ಕೃಷ್ಣಮಠದ ಸುತ್ತಮುತ್ತ ಆಕ್ಷೇಪಗಳು ಇವೆ. ಹಾರ್ನ್ ಮೈಕ್ ಬದಲು ಸೌಂಡ್ ಬಾಕ್ಸ್ಗಳನ್ನು ಉಪಯೋಗಿಸುವುದರಿಂದ ಸಮಸ್ಯೆ ಪರಿಹಾರ ಕಾಣುತ್ತದೆ. ಶಬ್ದ ಜಾಸ್ತಿ ಇದ್ದರೆ ಮನವೊಲಿಸುವ ಕೆಲಸ ಮಾಡಲಾಗುವುದು ಎಂದು ರಘುಪತಿ ಭಟ್ ತಿಳಿಸಿದರು.
ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಬಗ್ಗೆ ನಮ್ಮ ಬಳಿ ಯಾವುದೇ ಚರ್ಚೆ ಆಗಿಲ್ಲ. ನನಗೆ ಯಾವುದೇ ಮಾಹಿತಿ ಇಲ್ಲ. ಅವರು ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ನಮಗೆ ಯಾವುದೇ ಆಕ್ಷೇಪ ಇಲ್ಲ ಎಂದು ರಘುಪತಿ ಭಟ್ ಪ್ರತಿಕ್ರಿಯಿಸಿದರು.







