ಮೇ 10ರಂದು ‘ಅಂತ್ಯೋದಯದತ್ತ ಒಂದು ಹೆಜ್ಜೆ’ ಸಮಾವೇಶ
ಉಡುಪಿ : ಬಿಜೆಪಿ ಉಡುಪಿ ನಗರ ಮತ್ತು ಗ್ರಾಮಾಂತರ ಬಿಜೆಪಿಯ ಜಂಟಿ ಆಶ್ರಯದಲ್ಲಿ ನಗರ ಎಸ್.ಸಿ, ಎಸ್.ಟಿ ಮೋರ್ಚಾಗಳ ಸಹಭಾಗಿತ್ವದಲ್ಲಿ ಅಂತ್ಯೋದಯದತ್ತ ಒಂದು ಹೆಜ್ಜೆ’ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾವೇಶವನ್ನು ಮೇ 10ರಂದು ಸಂಜೆ ೩.೪೫ಕ್ಕೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿ ರುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಸ್ತುವಾರಿ ಸಚಿವ ಎಸ್. ಅಂಗಾರ, ರಾಜ್ಯ ಎಸ್.ಟಿ ಮೋರ್ಚಾ ಅಧ್ಯಕ್ಷ ತಿಪ್ಪರಾಜ್ ಹವಾಲ್ದಾರ್, ರಾಜ್ಯ ಎಸ್.ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಭಾಗವಹಿಸುವರು ಎಂದರು.
ಅಂದು ಬೆಳಿಗ್ಗೆ ಉಡುಪಿಯ ಸರಳೇಬೆಟ್ಟುವಿನ ನೆಹರು ಕಾಲೊನಿಯ ಕೊರಗರ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಹಾರ ಸೇವಿಸಲಿರುವರು. ಬಳಿಕ ನಿರ್ಗತಿಕ ಕೊರಗ ಕುಟುಂಬಕ್ಕೆ ಉಡುಪಿ ನಗರ ಬಿಜೆಪಿ ನಿರ್ಮಿಸಿದ 5 ಲಕ್ಷ ರೂ. ವೆಚ್ಚದ ಮನೆಯನ್ನು ಹಸ್ತಾಂತರಿಸಲಾಗುವುದೆಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ಎಸ್.ನಾಯ್ಕ್, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್, ನಗರ ಎಸ್.ಸಿ. ಮೋರ್ಚಾ ಅಧ್ಯಕ್ಷ ಕಿರಣ್ ಕುಮಾರ್, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯ ದರ್ಶಿ ದಿನಕರ್ ಬಾಬು, ನಗರ ಅಧ್ಯಕ್ಷ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.