ಅಂಬೇಡ್ಕರ್ ವಿಚಾರವನ್ನು ಸರಿಯಾದ ನೆಲೆಯಲ್ಲಿ ಅರ್ಥಮಾಡಿಸುವುದು ಅನಿವಾರ್ಯ: ಕೋಟಿಗಾನಹಳ್ಳಿ ರಾಮಯ್ಯ

ಬೆಂಗಳೂರು, ಮೇ 6: ಅಂಬೇಡ್ಕರ್ ವಿಚಾರಗಳನ್ನು ಪ್ರತಿಯೊಬ್ಬರು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಅದನ್ನು ಸರಿಯಾದ ನೆಲೆಯಲ್ಲಿ ವ್ಯವಸ್ಥಿತವಾಗಿ ಅರ್ಥಮಾಡಿಸುವುದು ಅನಿವಾರ್ಯವಾಗಿದೆ ಎಂದು ಹೋರಾಟಗಾರರಾದ ಕೋಟಿಗಾನಹಳ್ಳಿ ರಾಮಯ್ಯ ಅವರು ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತರ ಮೇಲೆ ದಶಕಗಳಿಂದಲೂ ಇಂದಿನವರೆಗೂ ನಡೆಯುತ್ತಿರುವ ಅತ್ಯಾಚಾರ, ಶೋಷಣೆ, ಕೊಲೆ, ಹಿಂಸೆ ಇನ್ನುಮುಂತಾದ ಅಮಾನವೀಯ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ. ಮಹಾರಾಷ್ಟ್ರದ ದಲಿತ ಹೆಣ್ಣುಮಗಳ ಮೇಲಿನ ಅತ್ಯಾಚಾರ ಹಾಗೂ ಆ ಹೆಣ್ಣುಮಗಳು ಪೋಲಿಸ್ ಠಾಣೆಗೆ ಹೋದಾಗ ಪೋಲಿಸ್ ಅಧಿಕಾರಿಯ ನಡೆ ಅಸಹ್ಯ ಹುಟ್ಟುವಂತೆ ಮಾಡುತ್ತದೆ. ಹಾಗಾಗಿ ಇಂದು ಅಂಬೇಡ್ಕರ್ ವಿಚಾರಗಳನ್ನು ಇಂದಿನ ಯುವಜನತೆಯ ಮನಸ್ಥಿತಿಗಳ ಹಿನ್ನೆಲೆಗೆ ಅನುಗುಣವಾಗಿ ತಲುಪಿಸುವ ಅಗತ್ಯವನ್ನು ಕಂಡುಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಇಂದಿನ ಸರಕಾರ ಫ್ಯಾಶಿಸ್ಟ್ ಧೋರಣೆ ಹೊಂದಿದೆ. ಇಂದು ನಮ್ಮ ದೇಶ ಪೇಶ್ವೆ ಮತ್ತು ಪ್ರಭುತ್ವ ಭಾರತವಾಗಿದೆ ಎಂದು ಕಿಡಿಕಾರಿದ ಅವರು, ಅಂಬೇಡ್ಕರ್ ವಿಚಾರಗಳನ್ನು ಸಾಂಸ್ಕøತಿಕ ವಿಚಾರಧಾರೆಗಳೊಂದಿಗೆ ಎದುರುಗೊಳ್ಳುವುದು ಉತ್ತಮ ಎಂದರು.
ಅಜೀಂ ಪ್ರೇಮ್‍ಜೀ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎ.ನಾರಾಯಣ್ ಅವರು ಮಾತನಾಡಿ, ಅಂಬೇಡ್ಕರ್ ವಿಚಾರಗಳು ಕೇವಲ ಒಂದು ವರ್ಗದವರಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ವರ್ಗದ ಜನಾಂಗವು ತಿಳಿದುಕೊಳ್ಳುವಂತಾಗಬೇಕಿತ್ತು. ಇದು ಭಾರತದಂತಹ ದೇಶದಲ್ಲಿ ಸಾಧ್ಯವಾಗದೆ ಇರುವುದು ಬಹಳ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರು ಇಂದಿನ ಕಾಲದ ಅಪಾಯಗಳನ್ನು ಅಂದೇ ತಿಳಿಸಿದ್ದರು. ಅವರ ವಿಚಾರಗಳನ್ನು ಅರ್ಥಮಾಡಿಕೊಂಡು ಭಾರತ ನಡೆದಿದ್ದರೆ ಇಂದು ಅಪಾಯ ಮತ್ತು ದುರಂತಗಳು ಸಂಭವಿಸುತ್ತಿರಲಿಲ್ಲ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಎನ್.ಇ.ಎಸ್ ಸಂಸ್ಥೆಗಳ ಗೌರವ ಕಾರ್ಯದರ್ಶಿ ಪ್ರೊ.ಎಸ್.ಎನ್. ನಾಗರಾಜರೆಡ್ಡಿ, ಡಾ.ಸಿ.ಬಿ.ಅನ್ನಪೂರ್ಣಮ್ಮ, ಪ್ರೊ.ಪಿ.ಎಲ್.ರಮೇಶ್, ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಶಿವಣ್ಣ, ಸಹ ಸಂಚಾಲಕ ವಿ.ಎಲ್.ನರಸಿಂಹಮೂರ್ತಿ ಹಾಗೂ ವಿದ್ಯಾರ್ಥಿಗಳ, ಅಧ್ಯಾಪಕರು ಉಪಸ್ಥಿತರಿದ್ದರು.








