ಮೆಕ್ಸಿಕೊ: ಪತ್ರಕರ್ತನ ಮೃತದೇಹ ಪತ್ತೆ
ಈ ವರ್ಷದಲ್ಲಿ ಹತರಾದ ಪತ್ರಕರ್ತರ ಸಂಖ್ಯೆ 9ಕ್ಕೆ ಏರಿಕೆ

PHOTO:REUTERS
ಮೆಕ್ಸಿಕೊ ಸಿಟಿ, ಮೇ 6: ಮೆಕ್ಸಿಕೋದ ವಾಯವ್ಯ ರಾಜ್ಯ ಸಿನಲೊವದಲ್ಲಿ ಗುರುವಾರ ಪತ್ರಕರ್ತನ ಮೃತದೇಹ ಪತ್ತೆಯಾಗಿದ್ದು , ಇದರೊಂದಿಗೆ ಈ ವರ್ಷ ಮೆಕ್ಸಿಕೋದಲ್ಲಿ ಹತರಾದ ಪತ್ರಕರ್ತರ ಸಂಖ್ಯೆ 9ಕ್ಕೇರಿದೆ ಎಂದು ವರದಿಯಾಗಿದೆ. ಮೆಕ್ಸಿಕೋದ ಹಿರಿಯ ಪತ್ರಕರ್ತ, ಎಲ್ ಡಿಬೇಟ್ ದಿನಪತ್ರಿಕೆಯ ಅಂಕಣಕಾರ ಲೂಯಿಸ್ ಎನ್ರಿಖ್ ರಮಿರೆರ್ ಅವರ ಮೃತದೇಹ ಗುರುವಾರ ಸಿನಲೊವ ನಗರದ ಹೆದ್ದಾರಿಯ ಬಳಿ ಪತ್ತೆಯಾಗಿದೆ ಎಂದು ಅಟಾರ್ನಿ ಜನರಲ್ ಟ್ವೀಟ್ ಮಾಡಿದ್ದಾರೆ.
ರಮಿರೆರ್ ಅವರ ಮೃತದೇಹವನ್ನು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ, ಕಪ್ಪು ಬಣ್ಣದ ಬ್ಯಾಗಿನಲ್ಲಿ ತುಂಬಿಸಿ ಹೆದ್ದಾರಿ ಪಕ್ಕ ಎಸೆಯಲಾಗಿದೆ ಎಂದು ಪತ್ರಿಕೆಯ ಮಾಲಕರು ಹೇಳಿದ್ದಾರೆ. ಸುಮಾರು 40 ವರ್ಷದ ವೃತ್ತಿಜೀವನದಲ್ಲಿ ಹಲವು ಪ್ರತಿಷ್ಟಿತ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ರಮಿರೆರ್ಗೆ ಈ ಹಿಂದೆ ಬೆದರಿಕೆ ಕರೆ ಬಂದಿತ್ತು ಎಂದು ಎಲ್ಡಿಬೇಟ್ ವರದಿ ಮಾಡಿದೆ. ನಾನು ಮಾಡುತ್ತಿರುವ ಕಾರ್ಯ ಅಪಾಯವನ್ನು ಆಹ್ವಾನಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಕೆಲವು ವರ್ಷದ ಹಿಂದೆ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ರಮಿರೆರ್ ಅವರ ಸಾವಿನ ಬಗ್ಗೆ ತನಿಖೆ ನಡೆಸುವ ಮತ್ತು ಪತ್ರಕರ್ತರಿಗೆ ಅಗತ್ಯದ ಭದ್ರತೆ ಒದಗಿಸುವ ಕಾರ್ಯದಲ್ಲಿ ರಾಜ್ಯ ಮತ್ತು ಸ್ಥಳೀಯ ಸರಕಾರಗಳೊಂದಿಗೆ ಫೆಡರಲ್ ಸರಕಾರ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಮೆಕ್ಸಿಕೊ ಅಧ್ಯಕ್ಷರ ವಕ್ತಾರ ಜೀಸಸ್ ಕ್ಯುವಾಸ್ ಟ್ವೀಟ್ ಮಾಡಿದ್ದಾರೆ. ಮೆಕ್ಸಿಕೋದ ಹಾಲಿ ಅಧ್ಯಕ್ಷ ಆ್ಯಂಡ್ರೆಸ್ ಮಾನುವೆಲ್ ಲೊಪೆರ್ ಒಬ್ರಡಾರ್ ಅವರ ಆಡಳಿತಾವಧಿಯಲ್ಲಿ ಮಾಧ್ಯಮದ ವಿರುದ್ಧದ ಹಿಂಸಾಚಾರ ಗರಿಷ್ಟ ಮಟ್ಟಕ್ಕೇರಿದ್ದು, ಅವರ ಅಧಿಕಾರಾವಧಿಯಲ್ಲಿ ಇದುವರೆಗೆ 34 ಪತ್ರಕರ್ತರ ಹತ್ಯೆ ನಡೆದಿದೆ ಎಂದು ಆರ್ಟಿಕಲ್ 19 ಮಾಧ್ಯಮ ವರದಿ ಮಾಡಿದೆ.ಪತ್ರಕರ್ತರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮೆಕ್ಸಿಕೋವನ್ನು ಆಗ್ರಹಿಸಬೇಕೆಂದು ಅಮೆರಿಕದ ಸಂಸದರು ಅಧ್ಯಕ್ಷ ಬೈಡನ್ರನ್ನು ಆಗ್ರಹಿಸಿದ್ದಾರೆ ಎಂದು ವರದಿ ಹೇಳಿದೆ.







