ಶ್ರೀಲಂಕಾದಲ್ಲಿ ಸರಕಾರಿ ವಿರೋಧಿ ಪ್ರತಿಭಟನೆ: ರೈಲು, ಬಸ್ಸು ಸಂಚಾರ ಸ್ಥಗಿತ; ಜನಜೀವನ ಅಸ್ತವ್ಯಸ್ತ

ಕೊಲಂಬೊ, ಮೇ 6: ದೇಶಕ್ಕೆ ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹೊಣೆ ಹೊತ್ತು ಅಧ್ಯಕ್ಷರು ಮತ್ತು ಸರಕಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಶ್ರೀಲಂಕಾ ದೇಶದೆಲ್ಲೆಡೆ ಪ್ರತಿಭಟನೆ ತೀವ್ರಗೊಂಡಿದ್ದು ಶುಕ್ರವಾರ ರೈಲು, ಬಸ್ಸು ಸಹಿತ ವಾಹನ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.
ಖಾಸಗಿ ಬಸ್ಸು ಮತ್ತು ರೈಲುಗಳ ನಿರ್ವಾಹಕರೂ ಮುಷ್ಕರಕ್ಕೆ ಕೈಜೋಡಿಸಿದ್ದರಿಂದ ವಾಹನ ಸಂಚಾರ ಮೊಟಕುಕೊಂಡಿತ್ತು. ಕೊಲಂಬೊದ ಮುಖ್ಯ ರೈಲ್ವೇ ನಿಲ್ದಾಣವನ್ನೂ ಮುಚ್ಚಲಾಗಿತ್ತು. ಬೆರಳೆಣಿಕೆಯಷ್ಟು ಸರಕಾರಿ ಬಸ್ಸುಗಳು ಸಂಚಾರ ನಡೆಸಿವೆ. ದೇಶದಾದ್ಯಂತ ಶಾಲೆ, ಕಾಲೇಜುಗಳು, ಅಂಗಡಿ, ಉದ್ದಿಮೆಗಳು ಬಾಗಿಲು ಮುಚ್ಚಿದ್ದವು. ಆರೋಗ್ಯ ಸೇವಾ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ತುರ್ತು ಆರೋಗ್ಯ ಸೇವೆಯನ್ನು ಒದಗಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ, ಸರಕಾರದ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ ಗುರುವಾರ ಸಂಸತ್ತಿನ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾಕಾರರು ಧರಣಿ ಕುಳಿತರು. ಸಾವಿರಾರು ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಆರ್ಥಿಕ ಸಮಸ್ಯೆ ಬಿಗಡಾಯಿಸಿರುವುದರಿಂದ ಶ್ರೀಲಂಕಾದಲ್ಲಿ ಆಹಾರವಸ್ತು, ಇಂಧನ ಮತ್ತು ಔಷಧದ ತೀವ್ರ ಕೊರತೆಯಿದೆ. ಅಲ್ಲದೆ ದೈನಂದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಜನತೆ ಹತಾಶರಾಗಿದ್ದು ಸರಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಈ ಮಧ್ಯೆ, ಅಧ್ಯಕ್ಷ ಗೊತಬಯ ರಾಜಪಕ್ಸ ಮತ್ತು ಸರಕಾರದ ವಿರುದ್ಧ ಮುಂದಿನ ವಾರ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಪಕ್ಷ ಮುಖಂಡ ಸಜಿತ್ ಪ್ರೇಮದಾಸ ಹೇಳಿದ್ದಾರೆ. ಆದರೆ ಪದತ್ಯಾಗಕ್ಕೆ ನಿರಾಕರಿಸಿರುವ ರಾಜಪಕ್ಸ, ಸರ್ವಪಕ್ಷಗಳನ್ನು ಒಳಗೊಂಡ ಸರಕಾರ ಸ್ಥಾಪನೆಯ ಕೊಡುಗೆ ಮುಂದಿಟ್ಟಿದ್ದಾರೆ.







