ಹೈದರಾಬಾದ್ ಮರ್ಯಾದೆಗೇಡು ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಹೈದರಾಬಾದ್, ಮೇ 5: ತಮ್ಮ ಕುಟುಂಬದ ಮುಸ್ಲಿಮ್ ಯುವತಿಯನ್ನು ಮದುವೆಯಾಗಿದ್ದಕ್ಕಾಗಿ ದಲಿತ ಯುವಕನನ್ನು ಕೊಲೆಗೈದಿದ್ದ ಆರೋಪದಲ್ಲಿ ಇಬ್ಬರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಮೇ 4ರಂದು ಸಂಜೆ ಹೈದರಾಬಾದ್ ನ ಸರೂರ್ ನಗರ ಪ್ರದೇಶದಲ್ಲಿಯ ಜನನಿಬಿಡ ರಸ್ತೆಯಲ್ಲಿ ಬಿ.ನಾಗರಾಜು (26) ಎಂಬಾತನನ್ನು ಆತನ ಪತ್ನಿ ಆಶ್ರಿನ್ ಸುಲ್ತಾನಾಳ ಕಣ್ಣೆದುರೇ ಚೂರಿಯಿಂದ ಇರಿದು, ಕಬ್ಬಿಣದ ಸರಳಿನಿಂದ ಹೊಡೆದು ಕೊಲ್ಲಲಾಗಿತ್ತು.
ಸೈಯದ್ ಮೊಬಿನ್ ಅಹ್ಮದ್ ಮತ್ತು ಮುಹಮ್ಮದ್ ಮಸೂದ್ ಅಹ್ಮದ್ ಬಂಧಿತ ಆರೋಪಿಗಳಾಗಿದ್ದು, ಮೊಬಿನ್ ಆಶ್ರಿನ್ ಸುಲ್ತಾನಾಳ ಸೋದರನಾಗಿದ್ದಾನೆ.
‘ಅವರು ನನ್ನ ಗಂಡನನ್ನು ನಡುರಸ್ತೆಯಲ್ಲಿ ಕೊಂದರು. ಅಲ್ಲಿ ಅಷ್ಟೆಲ್ಲ ಜನರಿದ್ದರು. ಆದರೆ ಜೀವವನ್ನು ರಕ್ಷಿಸುವ ಬದಲು ತಮ್ಮ ಮೊಬೈಲ್ ಫೋನ್ ಗಳಲ್ಲಿ ಘಟನೆಯ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದರು. ನನ್ನ ಗಂಡನನ್ನು ರಕ್ಷಿಸಿಕೊಳ್ಳಲು ನಾನು ಆತನ ಮೈಮೇಲೆ ಬಿದ್ದಿದ್ದೆ. ಆದರೆ ಅವರು ನನ್ನನ್ನು ದೂರ ತಳ್ಳಿದ್ದರು ಮತ್ತು ಕಬ್ಬಿಣದ ರಾಡ್ ಗಳಿಂದ ಹೊಡೆದು ಆತನ ತಲೆಯನ್ನು ಒಡೆದಿದ್ದರು ’ ಎಂದು ಸುಲ್ತಾನಾ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದಳು.
ನಾಗರಾಜು ಮತ್ತು ಸುಲ್ತಾನಾ ಜ.30ರಂದು ಹಿಂದು ವಿಧಿಗಳಂತೆ ಮದುವೆಯಾಗಿದ್ದರು. ಸುಲ್ತಾನಾಳ ಕುಟುಂಬವು ಮದುವೆಯನ್ನು ವಿರೋಧಿಸಿತ್ತು.
ಆರೋಪಿಗಳು ನಾಗರಾಜುವನ್ನು ಆತನ ಕೆಲಸದ ಸ್ಥಳದಲ್ಲಿ ಕೊಲ್ಲಲು ಮೊದಲು ಯೋಜಿಸಿದ್ದರು. ಬಳಿಕ ದಂಪತಿ ಸಂಬಂಧಿ ಮನೆಯಿಂದ ಮರಳುತ್ತಿರುವಾಗ ಸರೂರ್ ನಗರದಲ್ಲಿ ದಾಳಿ ನಡೆಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಈ ನಡುವೆ ಬಿಜೆಪಿ ಕಾರ್ಯಕರ್ತರು ನಾಗರಾಜು ಹತ್ಯೆಯನ್ನು ವಿರೋಧಿಸಿ ಹೈದರಾಬಾದ್ ನಲ್ಲಿ ಪ್ರತಿಭಟನೆಗಳನ್ನು ನಡೆಸಿದರು.







