ಸಿಎಎ ಜಾರಿಗೆ ಕೇಂದ್ರ ಯತ್ನಿಸಿದಲ್ಲಿ ಮತ್ತೆ ಬೀದಿಗಿಳಿದು ಹೋರಾಟ: ಅಖಿಲ್ ಗೊಗೋಯ್ ಎಚ್ಚರಿಕೆ

ಗುವಾಹಟಿ,ಮೇ 7: ಕೊರೋನ ವೈರಸ್ ಸೋಂಕಿನ ಹಾವಳಿ ಕೊನೆಗೊಳ್ಳುತ್ತಿದ್ದಂತೆಯೇ ಕೇಂದ್ರ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿಗೊಳಿಸುವುದಾಗಿ ಕೇಂದ್ರ ಸಚಿವ ಅಮಿತ್ ಶಾ ಅವರು ತನ್ನ ಪಶ್ಚಿಮಬಂಗಾಳ ಭೇಟಿ ವೇಳೆ ತಿಳಿಸಿದ ಮರುದಿನವೇ ಅಸ್ಸಾಂನ ಸಾಮಾಜಿಕ ಹೋರಾಟಗಾರ, ರಾಜಕೀಯ ನಾಯಕ ಅಖಿಲ್ ಗೊಗೊಯಿ ಅವರು ಸಿಎಎ ವಿರುದ್ಧ ತಾನು ಬೆಂಬಲಿಗರೊಂದಿಗೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಜನ ವಿರೋಧಿ ಕಾನೂನನ್ನು ಜನತೆ ಒಪ್ಪಿಕೊಳ್ಳಲಾರರು ಎಂದವರು ಹೇಳಿದ್ದಾರೆ.
‘ಸಿಎಎ ಕುರಿತ ಕೇಂದ್ರ ಸರ್ಕಾರ ಆದೇಶವನ್ನು ಅಸ್ಸಾಂನ ಜನತೆ ಸ್ವೀಕರಿಸುವುದಿಲ್ಲ’ಎಂದು ಗೊಗೋಯಿ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸಿಎಎ ಒಂದು ಕರಾಳವಾದ ಕಾಯ್ದೆಯಾಗಿದ್ದು, ಅದಕ್ಕೆ ಅಸ್ಸಾಂನಲ್ಲಿ ಯಾವುದೇ ಸ್ಥಾನವಿಲ್ಲವೆಂದು ತಿಳಿಸಿದರು.
ಸಿಎಎ ಅನ್ನು ವಿರೋಧಿಸುವಲ್ಲಿ ಅಸ್ಸಾಂನ ಎಲ್ಲಾ ವರ್ಗಗಳ ಜನರು ಒಗ್ಗಟ್ಟಾಗಿದ್ದಾರೆಂಬುದನ್ನು ಬಿಜೆಪಿ ಅರಿತುಕೊಳ್ಳಬೇಕಾಗಿದೆಯೆಂದು ಅವರು ಹೇಳಿದರು.
‘ಸಿಎಎ ವಿರುದ್ಧ ನಾವು ಬೀದಿಗಿಳಿದು ಹೋರಾಡಲಿದ್ದೇವೆ. ಒಂದು ವೇಳೆ ನಿಜಕ್ಕೂ ಕೇಂದ್ರ ಸರಕಾರವು ಸಿಎಎ ಜಾರಿಗೆ ಮುಂದಾದಲ್ಲಿ ನನ್ನ ರಾಜಕೀಯ ಪಕ್ಷವಾದ ರೈಜೊರ್ ದಳವು ಸಿಎಎ ವಿರುದ್ಧದ ಹೋರಾಟದ ನೇತೃತ್ವವನ್ನು ವಹಿಸಲಿದೆ. ಇದೊಂದು ಜನವಿರೋಧಿ ಕಾಯ್ದೆಯಾಗಿದೆ. ಸಿಎಎ ಕುರಿತ ಯಾವುದೇ ಆದೇಶವನ್ನು ನಾವು ಒಪ್ಪಿಕೊಳ್ಳುವುದಿಲ್ಲವೆಂಬುದನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ’ ಎಂದವರು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ನೇತೃತ್ವವನ್ನು ವಹಿಸುವ ಮೂಲಕ ಗೊಗೊಯಿ ದೇಶಾದ್ಯಂತ ಗಮನಸೆಳೆದಿದ್ದರು. 2019ರಲ್ಲಿ ಅಸ್ಸಾಂನಲ್ಲಿ ಸಿಎಎ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿ ಗೊಗೊಯಿ ಅವರನ್ನು ಬಂಧಿಸಲಾಗಿತ್ತು ಹಾಗೂ ಅವರ ವಿರುದ್ಧ ಕಠೋರವಾದ ಭಯೋತ್ಪಾದನಾ ವಿರೋಧಿ ಯುಎಪಿಎ ಕಾನೂನಿನಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.







