ನಾವು ಏನು ಮಾಡಬೇಕೆಂಬುದು ನಮಗೆ ಗೊತ್ತಿದೆ: ಭಾರತದ ಉಕ್ರೇನ್ ನಿಲುವನ್ನು ಟೀಕಿಸಿದ ಡಚ್ ರಾಯಭಾರಿಗೆ ತಿರುಮೂರ್ತಿ ತರಾಟೆ
ಹೊಸದಿಲ್ಲಿ,ಮೇ 6: ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವನ್ನು ಟೀಕಿಸಿದ ಡಚ್ ರಾಯಭಾರಿಯನ್ನು ವಿಶ್ವಸಂಸ್ಥೆಯಲ್ಲಿನ ಭಾರತ ರಾಯಭಾರಿ ಟಿ.ಎಸ್. ತಿರುಮೂರ್ತಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ತನ್ನ ಹೇಳಿಕೆಯ ಪ್ರತಿಲಿಪಿಯನ್ನು ತಿರುಮೂರ್ತಿ ಅವರು ಟ್ವೀಟ್ ಮಾಡಿದ ಬಳಿಕ ಅದಕ್ಕೆ ಪ್ರತಿಕ್ರಿಯಿಸಿದ ಬ್ರಿಟನ್ ನಲ್ಲಿನ ಡಚ್ ರಾಯಭಾರಿ ಕರೇಲ್ ವಾನ್ ವೂಸ್ಟೆರೊಮ್, ‘ನೀವು ಸಾಮಾನ್ಯ ಸಭೆಗೆ ಗೈರು ಹಾಜರಾಗಬಾರದಿತ್ತು. ವಿಶ್ವಸಂಸ್ಥೆಯ ಸನದನ್ನು ಗೌರವಿಸಿ’ ಎಂದು ಮರುಟ್ವೀಟ್ ಮಾಡಿದ್ದರು.
ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ತಿರುಮೂರ್ತಿ ಅವರು, ‘‘ದಯವಿಟ್ಟು ನಮ್ಮನ್ನು ಪೋಷಿಸದಿರಿ. ನಾವು ಏನು ಮಾಡಬೇಕೆಂಬುದು ನಮಗೆ ಗೊತ್ತಿದೆ ’’ ಎಂದು ಹೇಳಿದ್ದರು.
ಮೇ 4ರಂದು ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತವು ಉಕ್ರೇನ್ ಬಿಕ್ಕಟ್ಟಿನ ಕುರಿತ ತನ್ನ ನಿಲುವನ್ನು ಪುನರುಚ್ಚರಿಸಿತ್ತು. ಉಕ್ರೇನ್ ನಲ್ಲಿ ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಶಾಂತಿಯನ್ನು ಮರುಸ್ಥಾಪಿಬೇಕಾಗಿದೆ ಎಂದು ಹೇಳಿತ್ತು. ಆದರೆ ರಶ್ಯ ವಿರುದ್ಧದ ನಿರ್ಣಯದ ಕುರಿತ ಮತದಾನದಿಂದ ಮತ್ತೆ ಗೈರು ಹಾಜರಾಗಿತ್ತು.
ಉಕ್ರೇನ್ ಸಮರದ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾಷಣ ಮಾಡಿದ ತಿರುಮೂರ್ತಿ ಅವರು, ‘ಭಾರತವು ಶಾಂತಿಯ ಜೊತೆಗೆಯೇ ಇರುತ್ತದೆ. ಹೀಗಾಗಿ ಈ ಸಂಘರ್ಷದಲ್ಲಿ ಯಾರೂ ಗೆಲ್ಲಲಾರರು. ಈ ಸಂಘರ್ಷದಿಂದ ಬಾಧಿತರಾದವರ ಯಾತನೆಯು ಇನ್ನೂ ಮುಂದುವರಿಯಲಿದೆ. ಈಆಘಾತವನ್ನು ಅಂತ್ಯಗೊಳಿಸಲು ರಾಜತಾಂತ್ರಿಕತೆಯೊಂದೇ ಕಟ್ಟಕಡೆಯ ಪರಿಹಾರ’ ಎಂದು ಹೇಳಿದ್ದರು.







