ಎಪ್ರಿಲ್ ನಲ್ಲಿ ಆಹಾರದ ಬೆಲೆ ತುಸು ಇಳಿಕೆಯಾಗಿದೆ: ವಿಶ್ವಸಂಸ್ಥೆ

ರೋಮ್, ಮೇ 6: ಮಾರ್ಚ್ನಲ್ಲಿ ದಾಖಲೆ ಮಟ್ಟ ತಲುಪಿದ್ದ ಆಹಾರದ ಬೆಲೆ ಎಪ್ರಿಲ್ನಲ್ಲಿ ತುಸು ಇಳಿಕೆಯಾಗಿದೆ. ಆದರೆ ಮಾರುಕಟ್ಟೆಯ ಕಠಿಣ ಪರಿಸ್ಥಿತಿಯಿಂದಾಗಿ ಜಾಗತಿಕ ಆಹಾರ ಭದ್ರತೆಯ ಆತಂಕ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್ಎಒ) ಶುಕ್ರವಾರ ಹೇಳಿದೆ.
ಜಾಗತಿಕ ಆಹಾರ ವಸ್ತುಗಳ ವ್ಯವಹಾರದ ಮೇಲೆ ನಿಗಾ ಇರಿಸುವ ಎಫ್ಎಒ ಬೆಲೆ ಸೂಚ್ಯಾಂಕವು ಮಾರ್ಚ್ನಲ್ಲಿ 159.7 ಅಂಕಕ್ಕೆ ಏರಿಕೆಯಾಗಿದ್ದರೆ ಎಪ್ರಿಲ್ನಲ್ಲಿ 158.5 ಅಂಕ ದಾಖಲಿಸಿದೆ. ಸೂಚ್ಯಾಂಕದಲ್ಲಿ ತುಸು ಇಳಿಕೆ ದಾಖಲಾಗಿರುವುದು, ವಿಶೇಷವಾಗಿ ಕನಿಷ್ಟ ಆದಾಯದ, ಆಹಾರದ ಕೊರತೆ ಇರುವ ದೇಶಗಳಿಗೆ , ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೂ ಆಹಾರದ ಬೆಲೆ ಇನ್ನೂ ಗರಿಷ್ಟ ಮಟ್ಟದಲ್ಲಿಯೇ ಮುಂದುವರಿದಿರುವುದು ನಿರಂತರ ಮಾರುಕಟ್ಟೆ ಬಿಗಿತವನ್ನು ಪ್ರತಿಬಿಂಬಿಸುತ್ತದೆ ಮತ್ತು ದುರ್ಬಲ ವರ್ಗದವರಿಗೆ ಆಹಾರ ಭದ್ರತೆಯ ಸವಾಲನ್ನು ಒಡ್ಡಿದೆ ಎಂದು ಎಫ್ಎಒ ಮುಖ್ಯ ಆರ್ಥಿಕತಜ್ಞ ಮ್ಯಾಕ್ಸಿಮೊ ಟೊರೆರೊ ಕ್ಯುಲೆನ್ ಹೇಳಿದ್ದಾರೆ.
ಕೆಲ ತಿಂಗಳಿಂದ ಇಳಿಮುಖವಾಗಿದ್ದ ಜಾಗತಿಕ ಆಹಾರ ದರ ಉಕ್ರೇನ್-ರಶ್ಯ ಯುದ್ಧದ ಹಿನ್ನೆಲೆಯಲ್ಲಿ ಎಪ್ರಿಲ್ನಲ್ಲಿ ಗರಿಷ್ಟ ಮಟ್ಟಕ್ಕೇರಿತ್ತು. ಮಾರ್ಚ್ನಲ್ಲಿ 17% ಹೆಚ್ಚಳ ದಾಖಲಿಸಿದ್ದ ಬೇಳೆಕಾಳು ದರ ಸೂಚ್ಯಾಂಕ ಎಪ್ರಿಲ್ನಲ್ಲಿ 0.7% ಇಳಿಕೆಯಾಗಿದೆ. ಜೋಳದ ಬೆಲೆ 3%, ಗೋಧಿ ಬೆಲೆ 0.2% ಇಳಿಕೆಯಾಗಿದೆ. ತಾಳೆಎಣ್ಣೆ, ಸೂರ್ಯಕಾಂತಿ ಎಣ್ಣೆ ಸಹಿತ ಖಾದ್ಯತೈಲಗಳನ್ನು ಪಡಿತರ ವ್ಯವಸ್ಥೆಯಡಿ ತಂದ ಕಾರಣ ಎಪ್ರಿಲ್ನಲ್ಲಿ ಇದರ ಬೆಲೆ 5.7% ಇಳಿಕೆಯಾಗಿದೆ. ಸಕ್ಕರೆ ಬೆಲೆ 3.3%, ಮಾಂಸದ ಬೆಲೆ 2.2% ಮತ್ತು ಹಾಲಿನ ಉತ್ಪನ್ನಗಳ ಬೆಲೆ 0.9% ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಈ ಮಧ್ಯೆ, 2022ರಲ್ಲಿ ಜಾಗತಿಕ ಗೋಧಿ ಉತ್ಪಾದನೆಯನ್ನು 782 ಮಿಲಿಯನ್ ಟನ್ಗೆ ನಿಗದಿಗೊಳಿಸಲಾಗಿದೆ. ಕಳೆದ ತಿಂಗಳು ಇದನ್ನು 784 ಮಿಲಿಯನ್ ಟನ್ಗೆ ನಿಗದಿಗೊಳಿಸಲಾಗಿತ್ತು. ಉಕ್ರೇನ್-ರಶ್ಯ ನಡುವಿನ ಯುದ್ಧ ಇನ್ನೂ ಮುಂದುವರಿದಿರುವುದರಿಂದ ಉಕ್ರೇನ್ನಲ್ಲಿ ಗೋಧಿ ಬೆಳೆಯುವ ಪ್ರದೇಶದಲ್ಲಿ 20% ಕಡಿಮೆಯಾಗಬಹುದು. ಅಲ್ಲದೆ ಉತ್ತರ ಆಫ್ರಿಕಾದಲ್ಲಿ ಬರಗಾಲ ಪರಿಸ್ಥಿತಿ ಇರುವುದು ಇದಕ್ಕೆ ಮೂಲ ಕಾರಣ. ಉಕ್ರೇನ್ ಮತ್ತು ರಶ್ಯ ಅತ್ಯಧಿಕ ಗೋಧಿ ಬೆಳೆಯುವ ಮತ್ತು ರಫ್ತು ಮಾಡುವ ದೇಶಗಳಾಗಿವೆ.
2021/22ರಲ್ಲಿ ಜಾಗತಿಕ ಬೇಳೆಕಾಳು ವ್ಯಾಪಾರ 473 ಮಿಲಿಯನ್ ಟನ್ಗೆ ತಲುಪಲಿದೆ ಎಂದು ಎಫ್ಎಒ ಅಂದಾಜಿಸಿದೆ. ಕಳೆದ ತಿಂಗಳು ಅಂದಾಜು ಮಾಡಿದ್ದಕ್ಕಿಂತ ಇದು 3.7 ಮಿಲಿಯನ್ ಟನ್ ಅಧಿಕವಾಗಿದೆ, ಆದರೆ 2020/21ರ ದಾಖಲೆ ಮಟ್ಟಕ್ಕಿಂತ 1.2% ಕಡಿಮೆಯಾಗಲಿದೆ. ಎಪ್ರಿಲ್ನಲ್ಲಿ ರಶ್ಯವು ಈಜಿಪ್ಸ್, ಇರಾನ್ ಮತ್ತು ಟರ್ಕಿಗೆ ಅತ್ಯಧಿಕ ರಫ್ತು ಮಾಡಿದ್ದರಿಂದ ಹೆಚ್ಚಳ ದಾಖಲಾಗಿದೆ ಎಂದು ಎಫ್ಎಒ ಹೇಳಿದೆ







