ಪ್ರತಿಭಟನೆ ನಡುವೆಯೇ ಜ್ಞಾನವಾಪಿ ಮಸೀದಿ ಸಮೀಕ್ಷೆ

ವಾರಣಾಸಿ: ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ- ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ಕಾರ್ಯ ವ್ಯಾಪಕ ಪ್ರತಿಭಟನೆ ನಡುವೆಯೇ ಶುಕ್ರವಾರ ಆರಂಭವಾಗಿದೆ. ಇದು ದಶಕಗಳಷ್ಟು ಹಳೆಯ ಧಾರ್ಮಿಕ ವಿವಾದವನ್ನು ಮತ್ತೆ ಕೆದಕಿದೆ.
ಸಮೀಕ್ಷೆಯಲ್ಲಿ ವೀಡಿಯೊ ಚಿತ್ರೀಕರಣ ಮತ್ತು ತಪಾಸಣೆ ಒಳಗೊಂಡಿದ್ದು, ನ್ಯಾಯಾಲಯ ನೇಮಕ ಮಾಡಿದ ಅಭಿಯೋಜಕ ಆಯುಕ್ತ ಅಜಯ್ ಕುಮಾರ್ ಮತ್ತು ತಂಡ ಈ ಸಮೀಕ್ಷಾ ಕಾರ್ಯ ಕೈಗೊಂಡಿದೆ.
ಸ್ಥಳೀಯ ವಾರಣಾಸಿ ನ್ಯಾಯಾಲಯ ಎ.29ರಂದು ಈ ಸಂಬಂಧ ಆದೇಶ ನೀಡಿದ್ದು, ಮುಂದಿನ ಎರಡು- ಮೂರು ದಿನಗಳ ಕಾಲ ಮುಂದುವರಿಯಲಿದೆ ಎಂದು ನ್ಯಾಯಾಲಯದಲ್ಲಿ ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸಿರುವ ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮನ್ ಇಂತೆಝಾಮಿಯಾ ಮಸೀದಿ ಸಮಿತಿ, ಈ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕ್ರಮದ ವಿರುದ್ಧ ಶನಿವಾರ ನ್ಯಾಯಾಲಯದ ಕಟ್ಟೆ ಏರುವುದಾಗಿ ಪ್ರಕಟಿಸಿದೆ. "ಮಸೀದಿ ಪ್ರದೇಶದಲ್ಲಿ ವೀಡಿಯೊಗ್ರಫಿ ನಿಷೇಧಿಸಿರುವುದರಿಂದ ಇದಕ್ಕೆ ನಮ್ಮ ವಿರೋಧ ಇದೆ" ಎಂದು ಸಮಿತಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ಪ್ರಕಟಿಸಿದ್ದಾರೆ.
ಕಾಶಿ ವಿಶ್ವನಾಥ್- ಜ್ಞಾನವಾಪಿ ಸಂಕೀರ್ಣದಲ್ಲಿ ಮಾ ಶೃಂಗಾರ್ ಗೌರಿ ಸ್ಥಳದಲ್ಲಿ ಪ್ರಾರ್ಥನೆ ಮತ್ತು ಪೂಜೆಗೆ ಅವಕಾಶ ಕೋರಿ ಐದು ಮಂದಿ ಮಹಿಳೆಯರು 2021ರಲ್ಲಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಎ. 29ರಂದು ವಾರಣಾಸಿ ಸಿವಿಲ್ ನ್ಯಾಯಾಲಯ ಸಮೀಕ್ಷೆಗೆ ಆದೇಶ ನೀಡಿತ್ತು.