ಮಧ್ಯಪ್ರದೇಶ: ಕಟ್ಟಡದಲ್ಲಿ ಅಗ್ನಿ ಅನಾಹುತ, 7 ಮಂದಿ ಮೃತ್ಯು, 9 ಜನರ ರಕ್ಷಣೆ

Photo: PTI
ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಇಬ್ಬರು ಮಹಿಳೆಯರು ಸೇರಿದಂತೆ ಏಳು ಜನರು ಈ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಜನರನ್ನು ಇದುವರೆಗೆ ರಕ್ಷಿಸಲಾಗಿದೆ, ಅದರಲ್ಲಿ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದೋರ್ನ ಸ್ವರ್ನ್ ಬಾಗ್ ಕಾಲೋನಿಯಲ್ಲಿರುವ ಕಟ್ಟಡದ ನೆಲಮಾಳಿಗೆಯಲ್ಲಿ ಇಂದು ಬೆಳಿಗ್ಗೆ 3.10 ರ ಸುಮಾರಿಗೆ ನಿವಾಸಿಗಳು ಮಲಗಿದ್ದ ವೇಳೆ ಮುಖ್ಯ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ನಂತರ ಅಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಮತ್ತು ವಾಹನಗಳಿಗೆ ಬೆಂಕಿ ವ್ಯಾಪಿಸಿ, ಇಡೀ ಕಟ್ಟಡವನ್ನು ವೇಗವಾಗಿ ಸುಟ್ಟುಹಾಕಿತು.
ಪ್ರತಿ ಮಹಡಿಯಲ್ಲಿ ಒಂದೊಂದು ಫ್ಲಾಟ್ ಹೊಂದಿದ್ದ ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಸಾಧನಗಳನ್ನು ಅಳವಡಿಸದ ಕಾರಣ ಕಟ್ಟಡದ ಮಾಲೀಕ ಅನ್ಸಾರ್ ಪಟೇಲ್ ಅವರನ್ನು ಪೊಲೀಸರು ಬಂಧಿಸಿದ್ದು, ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆಯ ಕುರಿತು ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಕುಟುಂಬದ ಸದಸ್ಯರಿಗೆ ಈ ಆಳವಾದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.