ಉದ್ಯೋಗ ನಿರ್ವಹಣೆ ವೇಳೆ ಅಪಘಾತ: ಕನಿಷ್ಠ ವೇತನ ಪರಿಗಣಿಸಿ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು, ಮೇ 7: ಕೆಲಸದ ಸಂದರ್ಭದಲ್ಲಿ ಅಪಘಾತದಿಂದ ಸಾವು-ನೋವು ಸಂಭವಿಸಿದರೆ ಸಂತ್ರಸ್ತ ವ್ಯಕ್ತಿ ಸರಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿದ್ದರೂ ಆತನಿಗೆ ಕನಿಷ್ಠ ವೇತನ ಪ್ರಮಾಣ ಪರಿಗಣಿಸಿಯೇ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಾಹನ ಅಪಘಾತ ಪ್ರಕರಣದಲ್ಲಿ ಮೈಸೂರಿನ ಹೆಚ್.ಡಿ. ಕೋಟೆ ತಾಲೂಕಿನ ನಿವಾಸಿ ನಾಗೇಂದ್ರ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಕಾರ್ಮಿಕರ ಕನಿಷ್ಠ ವೇತನವನ್ನು 4 ರಿಂದ 8 ಸಾವಿರ ರೂ.ಗೆ ಹೆಚ್ಚಿಸಿ 2010ರ ಮೇ 31ರಂದು ಕೇಂದ್ರ ಸರಕಾರ ಆದೇಶಿಸಿದೆ. ಈ ಆದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ನ್ಯಾಯಾಲಯದ ಕರ್ತವ್ಯ. ಅಲ್ಲದೇ, ಕಾನೂನಿನ ಲಾಭವು ಜನರಿಗೆ ಅದರಲ್ಲೂ ಉದ್ಯೋಗ ನಿರ್ವಹಣೆ ವೇಳೆ ಅಪಘಾತ ಉಂಟಾಗಿ ಸಾವು-ನೋವು ಸಂಭವಿಸಿದ ಪ್ರಕರಣಗಳ ಬಾಧಿತರಿಗೆ ದೊರೆಯಬೇಕು. ಹೀಗಾಗಿ, ಪರಿಹಾರ ಕ್ಲೇಮ್ ಮಾಡುವಾಗ ಅಪಘಾತ ಸಂಭವಿಸಿದ ವೇಳೆ ಸರಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಪ್ರಮಾಣಕ್ಕಿಂತ ಕಡಿಮೆ ವೇತನ ಇತ್ತು ಎಂಬುದಾಗಿ ಬಾಧಿತರು ತಿಳಿಸಿದ್ದರೂ, ಪರಿಹಾರ ನಿಗದಿಗೆ ಕನಿಷ್ಠ ವೇತನ ಪ್ರಮಾಣವನ್ನೇ ಪರಿಗಣಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ ಎಂದು ಆದೇಶಿಸಿದೆ.
ಪ್ರಕರಣವೇನು: ಮೈಸೂರಿನ ಎಚ್.ಡಿ.ಕೋಟೆ ನಿವಾಸಿ ನಾಗೇಂದ್ರ ಎಂಬುವರು ಮಹದೇವಪ್ಪ ಎಂಬುವರ ಬಳಿ ಜೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. 2011ರ ಮೇ 1ರಂದು ನಾಗೇಂದ್ರ ಚಲಾಯಿಸುತ್ತಿದ್ದ ಜೀಪ್‍ಗೆ ಮತ್ತೊಂದು ವಾಹನ ಢಿಕ್ಕಿ ಹೊಡೆದು ಎಡಗಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಉದ್ಯೋಗದಿಂದ ತೆಗೆದುಹಾಕಲಾಗಿತ್ತು. ನಂತರ ಪರಿಹಾರಕ್ಕಾಗಿ ಮೋಟಾರು ವಾಹನಗಳ ನ್ಯಾಯಾಧಿಕರಣಕ್ಕೆ ಅವರು ಅರ್ಜಿ ಸಲ್ಲಿಸಿದ್ದರು.
ಎಡಗಣ್ಣಿನ ದೃಷ್ಟಿ ಕಳೆದುಕೊಂಡು ಉದ್ಯೋಗ ವಂಚಿತನಾದ ಕಾರಣ ನಾಗೇಂದ್ರ ಶೇ.100ರಷ್ಟು ಆದಾಯ ಸಂಪಾದನೆ ಸಾಮಥ್ರ್ಯ ಕಳೆದುಕೊಂಡಿದ್ದಾರೆ ಎಂದು ತೀರ್ಮಾನಿಸಿದ ನ್ಯಾಯಾಧಿಕರಣ, ಸಂತ್ರಸ್ತನಿಗೆ ಒಟ್ಟು 7,88,423 ಪರಿಹಾರ ಘೋಷಿಸಿತ್ತು. 2018ರ ಜುಲೈ 13 ರಂದು ಪರಿಹಾರ ಪಾವತಿಸುವಂತೆ ಜೀಪ್ ಮಾಲಿಕ ಹಾಗೂ ವಿಮಾ ಸಂಸ್ಥೆಗೆ ಆದೇಶಿಸಿತ್ತು. ಈ ಆದೇಶ ರದ್ದುಪಡಿಸುವಂತೆ ವಿಮಾ ಕಂಪನಿ ಮತ್ತು ಪರಿಹಾರ ಮೊತ್ತ ಹೆಚ್ಚಳ ಕೋರಿ ನಾಗೇಂದ್ರ ಹೈಕೋರ್ಟ್‍ಗೆ ಪ್ರತ್ಯೇಕ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದರು.
ವಕೀಲರ ವಾದ ಆಲಿಸಿದ ಹೈಕೋರ್ಟ್, 2011ರಲ್ಲಿ ಜೀಪ್ ಚಲಾಯಿಸುವಾಗ ನಾಗೇಂದ್ರ ಅಪಘಾತಕ್ಕೆ ಗುರಿಯಾಗಿ ಎಡಗಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಹೀಗಾಗಿ, 2010ರಲ್ಲಿ ಕೇಂದ್ರ ಸರಕಾರವು ಕನಿಷ್ಠ ವೇತನವನ್ನು 8 ಸಾವಿರ ರೂಪಾಯಿಗೆ ನಿಗದಿಪಡಿಸಿರುವ ಕಾರಣ ಆದನ್ನು ಆಧರಿಸಿಯೇ ಪ್ರಕರಣದಲ್ಲಿ ಪರಿಹಾರ ಗೊತ್ತುಪಡಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟು, ಪರಿಹಾರ ಮೊತ್ತವನ್ನು 10,41,168 ರೂ.ಗೆ ಹೆಚ್ಚಿಸಿ ಆದೇಶಿಸಿದೆ.







