ಕ್ರಿಮಿನಲ್ ಕೇಸು ಇದ್ದವರಿಗೆ ಬಿಜೆಪಿಗೆ ಪ್ರವೇಶವಿಲ್ಲ: ಶೋಭಾ ಕರಂದ್ಲಾಜೆ

ನೀಲಾವರ (ಬ್ರಹ್ಮಾವರ) : ಕಾಂಗ್ರೆಸ್‌ನ್ನು ತ್ಯಜಿಸುವ ಇರಾದೆಯ ಹಲವು ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ನಾಯಕರು ಬಿಜೆಪಿ ಸೇರುತ್ತಾರೆ. ಬಿಜೆಪಿಗೆ ಯಾರೇ ಬಂದರೂ ಬಾಗಿಲು ತೆರೆದಿದೆ. ಆದರೆ ಕ್ರಿಮಿನಲ್ ಕೇಸು ಇದ್ದವರಿಗೆ ಬಿಜೆಪಿ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನೀಲಾವರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಕಾಲಕಾಲಕ್ಕೆ ಅನ್ಯ ಪಕ್ಷದಲ್ಲಿದ್ದವರು ನಮ್ಮ ಪಕ್ಷವನ್ನು ಸೇರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರದ್ದು ಅಭಿವೃದ್ಧಿ, ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ರಹಿತ ಆಡಳಿತ. ಮೋದಿ ನೇತೃತ್ವವನ್ನು ಒಪ್ಪಿ ಹಲವಾರು ಜನ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ರಾಜ್ಯದ ಹಲವು ಗಲಭೆ, ಪಾಕಿಸ್ತಾನ ಪರ ಘೋಷಣೆ ವಿಚಾರ ಬಗ್ಗೆ ಎನ್‌ಐಎ ತನಿಖೆ ಆಗುತ್ತದೆ. ಈ ಘಟನೆ ಹಿಂದಿರುವ ಷಡ್ಯಂತ್ರ ಇದಕ್ಕೆ ಇರುವ ಬೆಂಬಲ ಯಾರು ಎಂಬುದು ತನಿಖೆ ಆಗಲಿದೆ. ಇಂಥ ಚಟುವಟಿಕೆ ಗಳಿಗೆ ಯಾವ ದೇಶದ ಬೆಂಬಲ ಇದೆ? ನಮ್ಮ ದೇಶದವರ ಬೆಂಬಲ ಇದ್ದರೆ ಅದು ಯಾರು ಎಂಬ ಬಗ್ಗೆ ಎನ್‌ಐಎ ತನಿಖೆ ಆಗಲಿದೆ ಎಂದು ಶೋಭಾ ಹೇಳಿದರು.