ಬೊಮ್ಮಾಯಿ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ: ನಳಿನ್ ಕುಮಾರ್ ಕಟೀಲ್

ಬೆಂಗಳೂರು, ಮೇ 7: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಗೊಳ್ಳಲಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವರ್ತೂರು ಪ್ರಕಾಶ್ ಸೇರಿದಂತೆ ಇನ್ನಿತರ ಮುಖಂಡ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘2023ರಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಾಧನೆ ಮಾಡಲಿದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸಲಿದೆ' ಎಂದು ನುಡಿದರು.
‘ಹಳ್ಳಿಯಿಂದ ರಾಜಧಾನಿ ಬೆಂಗಳೂರಿನ ವರೆಗೆ ಬಿಜೆಪಿ ಮೇಲೆ ವಿಶ್ವಾಸ ಹೆಚ್ಚಾಗಿದೆ. ಅದಕ್ಕಾಗಿ ಅನೇಕ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಮುಂದಿನ ದಿನಗಳು ನಮ್ಮದು. ಕಾಂಗ್ರೆಸ್ ಮನೆ ಖಾಲಿ ಆಗಲಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಕಾಂಗ್ರೆಸ್ ಒಳಜಗಳ ಇನ್ನಷ್ಟು ತೀವ್ರಗೊಳ್ಳಲಿದೆ' ಎಂದು ಕಟೀಲ್ ಟೀಕಿಸಿದರು.
‘ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಮತ್ತು ಕೋಮುಗಲಭೆಗಳು ನಡೆದಿದ್ದವು. ನಾಲ್ಕು ಲಕ್ಷ ಕೋಟಿ ರೂ.ಮೊತ್ತದ ಭ್ರಷ್ಟಾಚಾರ ಹಗರಣಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿದ್ದವು. ಈಗಾಗಲೇ ಪಿಎಸ್ಸೈ ನೇಮಕಾತಿ ಹಗರಣದ ತನಿಖೆಗೆ ಕೂಡಲೇ ಆದೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿನಂದನಾರ್ಹರು ಎಂದು ಕಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
‘ಆದರೆ, ಕಾಂಗ್ರೆಸ್‍ನ ಸಿದ್ದರಾಮಯ್ಯ ಆ ಧೈರ್ಯ ತೋರಿಸಿರಲಿಲ್ಲ. ಹತ್ತಾರು ಹಗರಣ ನಡೆದರೂ ಅದರ ತನಿಖೆಗೆ ಅವರು ಆದೇಶಿಸಿರಲಿಲ್ಲ. ಬೊಮ್ಮಾಯಿ ಅವರ ಪಾರದರ್ಶಕ ಮತ್ತು ಅಭಿವೃದ್ಧಿಪರ ಆಡಳಿತದಿಂದ ಜನರ ವಿಶ್ವಾಸ ಹೆಚ್ಚಾಗಿದೆ ಎಂದ ಅವರು, ಇಂದು ದೇಶದಲ್ಲಿ ಮೋದಿ ಯುಗ ಆರಂಭವಾಗಿದೆ. ಪರಿವರ್ತನೆಯ ಯುಗವನ್ನು ಪ್ರಧಾನಿ ಮೋದಿ ಅವರು ಮುನ್ನಡೆಸುತ್ತಿದ್ದಾರೆ' ಎಂದು ನುಡಿದರು.
ಮೋದಿಯವರ ಜನಪರ ಆಡಳಿತ, ಜನಮಾನಸದಲ್ಲಿ ನೆಲೆಯೂರಿರುವ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರ ಆಡಳಿತವನ್ನು ಮೆಚ್ಚಿಕೊಂಡು ಅನೇಕ ಮುಖಂಡರು ಪಕ್ಷ ಸೇರುತ್ತಿದ್ದಾರೆ. ರಾಜ್ಯಾಧ್ಯಕ್ಷನಾಗಿ ಅವರನ್ನು ಅಭಿನಂದಿಸಿ ಸ್ವಾಗತಿಸುತ್ತೇನೆ. ದೇಶ ರಕ್ಷಿಸಲು ಮೋದಿ ನೇತೃತ್ವ ಮತ್ತು ರಾಜ್ಯದಲ್ಲಿ ಬೊಮ್ಮಾಯಿ ಅವರ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂಬ ಇರಾದೆ ಜನತೆಯದು ಎಂದು ಅವರು ತಿಳಿಸಿದರು.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ನೀಡಿರುವ ಹಿನ್ನೆಲೆಯಲ್ಲಿ ನಾವು ಬಿಜೆಪಿ ಪಕ್ಷವನ್ನು ಸೇರುತ್ತಿದ್ದೇವೆ. ಅದು 175ಕ್ಕೂ ಹೆಚ್ಚು ಸ್ಥಾನಗಳು ಆಗಬಹುದು. ಇದಕ್ಕಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದೇನೆ'
-ವರ್ತೂರು ಪ್ರಕಾಶ್ ಮಾಜಿ ಸಚಿವ







