ಮಂಗಳೂರು: ಸತ್ಯಾಪನಾ ಶುಲ್ಕದ ಗುರಿ ಮುಟ್ಟಲು ಆಹಾರ ಸಚಿವರ ಸೂಚನೆ

ಮಂಗಳೂರು, ಮೇ.7: ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ನಿಗದಿ ಪಡಿಸಲಾದ ಸತ್ಯಾಪನಾ ಶುಲ್ಕದ ಗುರಿ ಮುಟ್ಟುವಂತೆ ಹಾಗೂ ತೂಕ ಮತ್ತು ಅಳತೆಯಲ್ಲಿ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಇಲಾಖೆ ವತಿಯಿಂದ ಹೆಚ್ಚಿನ ತಪಾಸಣೆ ನಡೆಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಹಾಗೂ ಅರಣ್ಯ ಇಲಾಖೆಯ ಸಚಿವರಾದ ಉಮೇಶ್ ಕತ್ತಿ ಅವರು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಕೆ.ಜಿ. ಕುಲಕರ್ಣಿಗೆ ಸೂಚನೆ ನೀಡಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲೆಯ ಆಹಾರ ಇಲಾಖೆ, ಕಾನೂನು ಮಾಪನ ಶಾಸ್ತ್ರ ಮತ್ತು ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಈ ನಿರ್ದೇಶನ ನೀಡಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ಪ್ರತಿ ವರ್ಷ ಸತ್ಯಾಪನ ಶುಲ್ಕ ಸಂಗ್ರಹಕ್ಕೆ ಈಗಾಗಲೇ ಗುರಿ ನಿಗದಿಪಡಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಸತ್ಯಾಪನಾ ಶುಲ್ಕದ ಸಂಗ್ರಹಣೆ ಹೆಚ್ಚಾಗಬೇಕು, ಅದರಂತೆ ಪೆಟ್ರೋಲ್ ಬಂಕ್ ಗಳು, ಕಿರಾಣಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳು ಹಾಗೂ ಇತರೆ ಅಂಗಡಿಗಳಲ್ಲಿ ತೂಕ ಮತ್ತು ಅಳತೆ ಪ್ರಮಾಣಗಳಲ್ಲಿ ವಂಚಿಸುವ ಪ್ರಕರಣಗಳನ್ನು ಹೆಚ್ಚು ಹೆಚ್ಚಾಗಿ ಪತ್ತೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಕುಲಕರ್ಣಿ ಜಿಲ್ಲೆಯಲ್ಲಿ 154 ಪೆಟ್ರೋಲ್ ಬಂಕ್ ಗಳಿದ್ದು ಅವುಗಳನ್ನು ಆಗಾಗ್ಯೆ ಪರಿಶೀಲನೆ ನಡೆಸಲಾಗುತ್ತಿದೆ, ಈಗಾಗಲೇ ವಂಚನೆ ಮಾಡಿದ ನಾಲ್ಕು ಬಂಕ್ ಗಳ ವಿರುದ್ದ ದಂಡ ವಿಧಿಸಲಾಗಿದೆ ಎಂದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಗದಿಪಡಿಸಲಾದ ಗುರಿ ಮುಟ್ಟಬೇಕು ಹಾಗೂ ಗ್ರಾಮ ಪಂಚಾಯತ್, ತಾಲೂಕುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವಂತೆ ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಜಿಲ್ಲೆಯ 3,668 ಆದ್ಯತಾ ಪಡಿತರ ಚೀಟಿಗಳು ಹಾಗೂ 3,370 ಆದ್ಯತೇತರ ಪಡಿತರ ಚೀಟಿಗಳ ವಿತರಣೆ ಬಾಕಿ ಉಳಿದಿದ್ದು ಅದನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದ ಸಚಿವರು, ಬಿಪಿಎಲ್ ಪಡಿತರ ಕಾರ್ಡು ಹೊಂದಿ, ಅದರಲ್ಲಿ ಪಡಿತರ ಪಡೆದವರನ್ನು ಹಚ್ಚುವಂತೆ ಸಚಿವರು ತಿಳಿಸಿದರು.
3,946 ಅನರ್ಹ ಪಡಿತರ ಚೀಟಿಗಳಿಗೆ ಒಟ್ಟು 15,78,731 ರೂ.ಗಳ ದಂಡ ವಸೂಲಿ ಮಾಡಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಸಭೆಗೆ ತಿಳಿಸಿದರು. ಮಾನದಂಡಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಈ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅರಣ್ಯ ಇಲಾಖೆ ವತಿಯಿಂದ ಬೆಳೆ ಹಾನಿ, ಜಾನುವಾರು ಹಾಗೂ ಮಾನವ ಸಾವು ಪ್ರಕರಣಗಳಲ್ಲಿ ಪರಿಹಾರ ಮೊತ್ತವನ್ನು ಸಂಬಂಧಿಸಿದವರಿಗೆ ಕಾಲಮಿತಿಯೊಳಗೆ ಪಾವತಿಸುವಂತೆ ಸೂಚನೆ ನೀಡಿದ ಸಚಿವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೆಡುತೋಪುಗಳ ನಿರ್ವಹಣೆಗೆ ಕ್ರಮ ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ವೈ.ಕೆ, ಬೆಳೆಹಾನಿ ಆಗುವ ಜಾನುವಾರು ಮತ್ತು ಮಾನವ ಹಾನಿ ಪ್ರಕರಣಗಳಲ್ಲಿ ಒಟ್ಟು 48.47 ಲಕ್ಷ ರೂಗಳ ಪರಿಹಾರವನ್ನು ಇಲಾಖೆ ವತಿಯಿಂದ ಪಾವತಿಸಲಾಗಿದೆ, ತಣ್ಣೀರು ಬಾವಿ ಬೀಚ್ ನಲ್ಲಿ ಡಾಲ್ಪೀನ್ ರಕ್ಷಣಾ ಕೇಂದ್ರದ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಶಾಸಕರಾದ ಡಿ. ವೇದವ್ಯಾಸ ಕಾಮತ್, ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.
ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.