ಪಶ್ಚಿಮ ದಂಡೆಯಲ್ಲಿ 4 ಸಾವಿರ ವಸಾಹತು ಘಟಕ ಸ್ಥಾಪನೆಗೆ ಇಸ್ರೇಲ್ ಅನುಮೋದನೆ

PHOTO:AFP
ಜೆರುಸಲೇಂ, ಮೇ 7: ಆಕ್ರಮಿತ ಪಶ್ಚಿಮ ದಂಡೆಯಲ್ಲಿ 4,000 ಅಕ್ರಮ ವಸಾಹತು ಘಟಕ ಸ್ಥಾಪಿಸುವ ಯೋಜನೆಯನ್ನು ಮುಂದುವರಿಸುವ ಪ್ರಸ್ತಾವನೆಗೆ ಇಸ್ರೇಲ್ ಅನುಮೋದನೆ ನೀಡಿದೆ ಎಂದು ಆ ದೇಶದ ಆಂತರಿಕ ಇಲಾಖೆಯ ಸಚಿವ ಅಯೆಲೆಟ್ ಶಕೆದ್ ಹೇಳಿದ್ದಾರೆ.
ಪಶ್ಚಿಮ ದಂಡೆಯಲ್ಲಿ ವಸಾಹತು ನಿರ್ಮಾಣ ಮೂಲಭೂತ, ಅಗತ್ಯದ ಮತ್ತು ಸ್ಪಷ್ಟವಾದ ವಿಷಯವಾಗಿದೆ ಎಂದು ವಸಾಹತು ಘಟಕಗಳ ಕಟ್ಟಾ ಬೆಂಬಲಿಗನಾಗಿರುವ ಸಚಿವರು ಟ್ವೀಟ್ ಮಾಡಿದ್ದಾರೆ. ಸೇನೆಯ ನೇತೃತ್ವದ ನಾಗರಿಕ ಆಡಳಿತ 1,452 ವಸಾಹತು ಘಟಕಕ್ಕೆ ಮತ್ತು ರಕ್ಷಣಾ ಸಚಿವರು ಮತ್ತೆ 2,536 ವಸಾಹತು ಘಟಕ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದು ಇಸ್ರೇಲ್ ನ ಹಾರೆಟ್ಝ್ ದಿನಪತ್ರಿಕೆ ವರದಿ ಮಾಡಿದೆ.
ಪೆಲೆಸ್ತೀನ್ ಗೆ ಸೇರಿದ ಭೂಮಿಯಲ್ಲಿ ಯೆಹೂದಿಗಳಿಗೆ ಮಾತ್ರ ನೆಲೆಸಲು ಅವಕಾಶವಿರುವ ಮನೆಗಳನ್ನು ನಿರ್ಮಿಸುವುದು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಪಶ್ಚಿಮ ದಂಡೆ ಮತ್ತು ಆಕ್ರಮಿತ ಪೂರ್ವ ಜೆರುಸಲೇಂ ಪ್ರದೇಶದಲ್ಲಿ ಕನಿಷ್ಟ 250 ಅಕ್ರಮ ವಸಾಹತು ಘಟಕದಲ್ಲಿ ಸುಮಾರು 7,50,000 ಇಸ್ರೇಲಿ ವಸಾಹತುಗಾರರು ನೆಲೆಸಿದ್ದಾರೆ. ಆಕ್ರಮಿತ ಪ್ರದೇಶದಲ್ಲಿ ವಸಾಹತು ಹೆಚ್ಚಿಸುವ ಇಸ್ರೇಲ್ ಯೋಜನೆಯನ್ನು ಅಮೆರಿಕ ವಿರೋಧಿಸುತ್ತಿದೆ. ಇಸ್ರೇಲ್-ಪೆಲೆಸ್ತೀನ್ ಬಿಕ್ಕಟ್ಟಿಗೆ 2 ರಾಷ್ಟ್ರ ಪರಿಹಾರ ರೂಪಿಸುವ ಪ್ರಯತ್ನಕ್ಕೆ ಇದರಿಂದ ಅಡ್ಡಿಯಾಗಲಿದೆ ಎಂದು ಅಮೆರಿಕ ಹೇಳುತ್ತಿದೆ.
4000 ವಸಾಹತು ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದು ಪಶ್ಚಿಮ ದಂಡೆಯಲ್ಲಿ ಪೆಲೆಸ್ತೀನೀಯರ ವಿರುದ್ಧ ಇಸ್ರೇಲ್ ವಸಾಹತುಗಾರರಿಂದ ಹಿಂಸೆ ಹೆಚ್ಚುವ ಮತ್ತು ಪೆಲೆಸ್ತೀನಿಯರ ಮೇಲೆ ವಿಧಿಸಲಾಗಿರುವ ನಿರ್ಬಂಧ ಮತ್ತು ತಾರತಮ್ಯದ ನೀತಿ ಹೆಚ್ಚಳದ ಸೂಚನೆಯಾಗಿದೆ. ಶಿಕ್ಷೆಯಿಲ್ಲದೆ ಮತ್ತು ಹೊಣೆಗಾರಿಕೆಯಿಲ್ಲದೆ ಇಸ್ರೇಲ್ ಅಂತರಾಷ್ಟ್ರೀಯ ನಿಯಮ ಉಲ್ಲಂಘಿಸುವ ಸಂಕೇತದ ಜೊತೆಗೆ, ಅಂತರಾಷ್ಟ್ರೀಯ ಸಮುದಾಯದ ದ್ವಿಮುಖ ನೀತಿಗೆ ದೃಷ್ಟಾಂತವಾಗಿದೆ ಎಂದು ಪೆಲೆಸ್ತೀನ್ ಕಾರ್ಯಕರ್ತ, ಯೂತ್ ಅಗೈನ್ಸ್ಟ್ ಸೆಟ್ಲ್ಮೆಂಟ್’ ಎಂಬ ಎನ್ಜಿಒ ಸ್ಥಾಪಕ ಇಸಾ ಅಮ್ರೊ ಹೇಳಿದ್ದಾರೆ.







