ಟ್ವಿಟರ್ ನಿಷೇಧ ರದ್ದತಿ ಕೋರಿದ್ದ ಟ್ರಂಪ್ ಅರ್ಜಿ ವಜಾ

PHOTO:TWITTER/@thehill
ನ್ಯೂಯಾರ್ಕ್, ಮೇ 7: ನಿಷೇಧಿಸಲಾಗಿರುವ ತನ್ನ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸುವಂತೆ ಕೋರಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲ್ಲಿಸಿದ್ದ ಅರ್ಜಿಯನ್ನು ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.ಟ್ವ್ವಿಟರ್ ನಲ್ಲಿ ಟ್ರಂಪ್ ಪೋಸ್ಟ್ ಮಾಡುವ ಹೇಳಿಕೆಗಳನ್ನು ಸೆನ್ಸಾರ್ ಮಾಡುವುದು ವಾಕ್ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ. ಯಾಕೆಂದರೆ, ಪ್ರಥಮ ತಿದ್ದುಪಡಿ ಕಾಯ್ದೆಯು ಪ್ರಜೆಗಳ ಹೇಳಿಕೆಯಲ್ಲಿ ಮಧ್ಯಪ್ರವೇಶಿಸದಂತೆ ಸರಕಾರಿ ಸಂಸ್ಥೆಗಳನ್ನು ತಡೆಯುತ್ತದೆ, ಆದರೆ ಖಾಸಗಿ ವ್ಯವಹಾರವನ್ನಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಸೇವಾ ನಿಯಮವು , ಯಾವುದೇ ವಿಷಯ ಅಥವಾ ಲೇಖನವು ಮಾನಹಾನಿಕರ ಅಥವಾ ಪ್ರಸಾರ ಯೋಗ್ಯವಲ್ಲ ಎಂದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲು ಟ್ವಿಟರ್ ಗೆ ಒಪ್ಪಂದದ ಅನುಮತಿಯನ್ನು ನೀಡಿದೆ ಎಂದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜೇಮ್ಸ್ ಡೊನಾಟೊ ಹೇಳಿದ್ದು, ಅರ್ಜಿಯನ್ನು ಪರಿಷ್ಕರಿಸಿ ಮರು ಸಲ್ಲಿಸಲು ಅರ್ಜಿದಾರರಾದ ಟ್ರಂಪ್, ಅಮೆರಿಕನ್ ಕನ್ಸರ್ವೇಟಿವ್ ಯೂನಿಯನ್ ಹಾಗೂ ಇತರ ಕೆಲವರಿಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.ಟ್ವಿಟರ್ ಖಾತೆ ನಿಷೇಧಿಸಿರುವುದಕ್ಕೆ ತಮಗೆ ನಗದು ಪರಿಹಾರ ನೀಡುವಂತೆ ಮತ್ತು ಟ್ವಿಟರ್ ಖಾತೆಯನ್ನು ತಕ್ಷಣ ಮರುಸ್ಥಾಪಿಸು ವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಟ್ವಿಟರ್ ಮತ್ತು ಅದರ ಈ ಹಿಂದಿನ ಮುಖ್ಯಸ್ಥ ಜಾಕ್ ಡೋರ್ಸೆಯನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿದೆ.







