ಮಥುರಾ: ಯಮುನಾ ಎಕ್ಸ್ ಪ್ರೆಸ್-ವೇಯಲ್ಲಿ ಕಾರು ಅಪಘಾತ 7 ಮಂದಿ ಸಾವು, ಇಬ್ಬರಿಗೆ ಗಾಯ

ಫೋಟೊ ಕೃಪೆ : ANI
ಮಥುರಾ, ಮೇ 7: ಮಥುರಾದ ಯಮುನಾ ಎಕ್ಸ್ ಪ್ರೆಸ್-ವೇಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಎಲ್ಲರೂ ಒಂದೇ ಕುಟುಂಬದ ಸದಸ್ಯರು. ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡು ಹರ್ಡೋಯಿಯಿಂದ ನೋಯ್ಡಕ್ಕೆ ಹಿಂದಿರುಗುತ್ತಿರುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಅವರ ಕಾರು ಮುಂಜಾನೆ 5 ಗಂಟೆಗೆ ಅನಾಮಿಕ ವಾಹನಕ್ಕೆ ಢಿಕ್ಕಿ ಹೊಡೆದಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಕಾರಿನಲ್ಲಿದ್ದ ಪ್ರಯಾಣಿಕರು ಉತ್ತರಪ್ರದೇಶದ ಹರ್ಡೋಯಿ ಜಿಲ್ಲೆಯಿಂದ ನೋಯ್ಡಾಕ್ಕೆ ಹಿಂದಿರುಗುತ್ತಿದ್ದರು” ಎಂದು ಪೊಲೀಸ್ ಅಧೀಕ್ಷಕ (ಗ್ರಾಮೀಣ) ಶ್ರೀಶ್ ಚಂದ್ರಾ ಅವರು ಹೇಳಿದ್ದಾರೆ.
‘‘ಶನಿವಾರ ಮುಂಜಾನೆ 5 ಗಂಟೆ ಹೊತ್ತಿಗೆ ಕಾರು ಅನಾಮಿಕ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.
‘‘ಮೃತಪಟ್ಟ 7 ಮಂದಿಯಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಹಾಗೂ ಒಂದು ಮಗು. ಇನ್ನೊಂದು ಮಗು ಹಾಗೂ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ” ಎಂದು ಮಥುರಾ ಪೊಲೀಸ್ ಅಧೀಕ್ಷಕ ತಿಳಿಸಿದ್ದಾರೆ.