ಉಕ್ರೇನ್ ನಿಂದ ಆಹಾರ ವಸ್ತು ರಫ್ತಾಗಲು ಅವಕಾಶ ನೀಡಬೇಕು: ವಿಶ್ವಸಂಸ್ಥೆ ಆಹಾರ ಯೋಜನೆ ಮುಖ್ಯಸ್ಥರ ಆಗ್ರಹ

PHOTO:TWITTER/@AndreiTarnea
ರೋಮ್, ಮೇ 7: ಉಕ್ರೇನ್ ನ ಒಡೆಸಾ ಪ್ರಾಂತದ ಬಂದರುಗಳನ್ನು ತೆರೆಯುವ ಮೂಲಕ ಅಲ್ಲಿ ಉತ್ಪಾದಿಸುವ ಆಹಾರ ವಸ್ತುಗಳು ವಿಶ್ವದ ಇತರೆಡೆ ಮುಕ್ತವಾಗಿ ತಲುಪುವಂತೆ ಸಹಕರಿಸಬೇಕು ಎಂದು ವಿಶ್ವ ಆಹಾರ ಯೋಜನೆ (ಡಬ್ಲ್ಯೂ ಎಫ್ಪಿ) ಮುಖ್ಯಸ್ಥ ಡೇವಿಡ್ ಬೆಸ್ಲೆ ಕರೆ ನೀಡಿದ್ದಾರೆ.
ಈಗ, ಉಕ್ರೇನ್ ಧಾನ್ಯದ ದಾಸ್ತಾನು ಕೇಂದ್ರ ತುಂಬಿದೆ. ಆದರೆ, ವಿಶ್ವದ 44 ಮಿಲಿಯನ್ ಜನತೆ ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಆದ್ದರಿಂದ ಉಕ್ರೇನ್ ಬಂದರುಗಳನ್ನು ತೆರೆಯಬೇಕಿದೆ ಮತ್ತು ಇಲ್ಲಿಂದ ಆಹಾರ ವಸ್ತುಗಳು ಹೊರ ತೆರಳಲು ಅನುವು ಮಾಡಿಕೊಡಬೇಕಿದೆ. ವಿಶ್ವದ ನೂರಾರು ಮಿಲಿಯ ಜನತೆ ಈ ಆಹಾರ ಪೂರೈಕೆಯನ್ನು ಎದುರು ನೋಡುತ್ತಿದ್ದಾರೆ. ಆದ್ದರಿಂದ ಆಹಾರದ ನೆರವಿಗಾಗಿ ಹತಾಶೆಯಿಂದ ಕಾಯುತ್ತಿರುವವರಿಗೆ ಇದನ್ನು ತಲುಪಿಸುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಶ್ಯ, ಆ ದೇಶದ ಪ್ರಮುಖ ಬಂದರುಗಳಿಗೆ ಮುತ್ತಿಗೆ ಹಾಕಿದೆ. ಬಂದರುಗಳಿಂದ ಆಹಾರ ಧಾನ್ಯ ರಫ್ತಾಗಲು ಅವಕಾಶ ಇಲ್ಲದಿರುವುದರಿಂದ, ಒಡೆಸಾ ಮುಂತಾದ ಪ್ರಮುಖ ಬಂದರುಗಳಲ್ಲಿ ಹಲವು ಮಿಲಿಯನ್ ಟನ್ ಗಳಷ್ಟು ಆಹಾರಧಾನ್ಯ ಉಳಿದಿದ್ದು ಆಹಾರದ ಗೋದಾಮು ತುಂಬಿದೆ. ಇವನ್ನು ತೆರವುಗೊಳಿಸದಿದ್ದರೆ ಮುಂದಿನ ಸುಗ್ಗಿ ಸಂದರ್ಭದ ಆಹಾರ ವಸ್ತುಗಳನ್ನು ದಾಸ್ತಾನಿರಿಸಲು ಸ್ಥಳಾವಕಾಶದ ಕೊರತೆಯಾಗಲಿದೆ ಎಂದು ಡಬ್ಯ್ಲೂಎಫ್ಪಿ ಹೇಳಿದೆ.
2022ರ ಆರಂಭದಲ್ಲಿ ವಿಶ್ವದ ಸುಮಾರು 276 ಮಿಲಿಯನ್ ಜನತೆ ತೀವ್ರ ಆಹಾರದ ಕೊರತೆ ಎದುರಿಸುತ್ತಿದ್ದರೆ, ಉಕ್ರೇನ್ ಯುದ್ಧ ಮುಂದುವರಿಯುತ್ತಿರುವುದರಿಂದ ಹೆಚ್ಚುವರಿ 47 ಮಿಲಿಯನ್ ಜನ ಆಹಾರದ ಕೊರತೆಯ ವ್ಯಾಪ್ತಿಗೆ ಸಿಲುಕುವ ಸಾಧ್ಯತೆಯಿದೆ. ಯುದ್ಧಕ್ಕಿಂತ ಮೊದಲು, ಕಪ್ಪು ಸಮುದ್ರದ ದಡದಲ್ಲಿರುವ 7 ಬಂದರುಗಳ ಮೂಲಕ ಉಕ್ರೇನ್ ನ ಆಹಾರ ಧಾನ್ಯಗಳು ವಿದೇಶಕ್ಕೆ ರಫ್ತಾಗುತ್ತಿದ್ದವು ಎಂದು ಡೇವಿಡ್ ಬೆಸ್ಲೆ ಹೇಳಿದ್ದಾರೆ.







