ಅಪ್ರಾಪ್ತ ವಯಸ್ಸಿನ ಪುತ್ರನ ಎದುರೇ ವಾಮಾಚಾರಿಯಿಂದ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ

ಬಾಲಸೋರೆ (ಒಡಿಶಾ), ಮೇ 7: ವಾಮಚಾರಿಯೋರ್ವ ಮಧ್ಯವಯಸ್ಸಿನ ಮಹಿಳೆಯನ್ನು ಆಕೆಯ ಎರಡೂವರೆ ವರ್ಷ ಪ್ರಾಯದ ಪುತ್ರನ ಎದುರಲ್ಲೇ 79 ದಿನಗಳ ಕಾಲ ಅತ್ಯಾಚಾರ ನಡೆಸಿದ ಘಟನೆ ಒಡಿಶಾದ ಬಾಲಸೋರೆಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕೊಠಡಿಯೊಂದರಲ್ಲಿ ಬಂಧಿಸಿ ಇರಿಸಲಾಗಿದ್ದ ಮಹಿಳೆ ಹಾಗೂ ಬಾಲಕನನ್ನು ಪೊಲೀಸರು ಶುಕ್ರವಾರ ರಕ್ಷಿಸಿದ್ದಾರೆ. ಆದರೆ, ಆರೋಪಿ ವಾಮಚಾರಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
ತನ್ನ ಹಾಗೂ ಅತ್ತೆಯ ನಡುವಿನ ವೈಮನಸ್ಸನ್ನು ಪರಿಹರಿಸಲು ವಾಮಚಾರಿಯೊಂದಿಗೆ ತಂಗ ಬೇಕು ಎಂದು ಪತಿ ಹಾಗೂ ಅತ್ತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆ 2017ರಲ್ಲಿ ವಿವಾಹವಾಗಿದ್ದರು. ವರದಕ್ಷಿಣೆಗಾಗಿ ಅವರಿಗೆ ಪತಿ ಹಾಗೂ ಅತ್ತೆ ಮಾವಂದಿರು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ತನ್ನೊಂದಿಗೆ ಕೆಲವು ತಿಂಗಳುಗಳ ಕಾಲ ತಂಗಿದರೆ, ಕೌಟುಂಬಿಕ ಸಮಸ್ಯೆ ಪರಿಹರಿಸಲಾಗುವುದು ಎಂದು ವಾಮಾಚಾರಿ ಭರವಸೆ ನೀಡಿದ್ದ. ಮಹಿಳೆ ಒಪ್ಪದೇ ಇದ್ದಾಗ ಅತ್ತೆ ಆಕೆಗೆ ಅಮಲು ಪದಾರ್ಥ ನೀಡಿದ್ದಳು. ಪ್ರಜ್ಞೆ ಬಂದಾಗ ಆಕೆ ಹಾಗೂ ಆಕೆಯ ಪುತ್ರ ವಾಮಾಚಾರಿಯ ಕೊಠಡಿಯಲ್ಲಿದ್ದರು ಎಂದು ಮಹಿಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.