ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ: ಮಹಿಳಾ ವಿಭಾಗದಲ್ಲಿ ಕೇರಳ ಪೊಲೀಸ್ - ಎಸ್‌ಆರ್‌ಎಂ ಚೆನ್ನೈ ಫೈನಲ್ ಗೆ

ಸುಳ್ಯ: ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಕೇರಳ ಪೊಲೀಸ್ ಅಜೇಯರಾಗಿ ಫೈನಲ್ ಪ್ರವೇಶಿಸಿದೆ. ಇಂದು ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಪೊಲೀಸ್ ತಂಡ ಎಸ್.ಆರ್.ಎಂ . ಯುನಿವರ್ಸಿಟಿ ಚೆನ್ನೈ ತಂಡವನ್ನು 3-1 ಸೆಟ್ ಅಂತರದಲ್ಲಿ ಸೋಲಿಸಿತು.
ಮಹಿಳಾ ವಿಭಾಗದ ಲೀಗ್ ಪಂದ್ಯಗಳು ಮುಕ್ತಾಯವಾಗಿದ್ದು 3 ಪಂದ್ಯಗಳೂ ಗೆದ್ದ ಕೇರಳ ಪೊಲೀಸ್ ಮತ್ತು ಇಂದಿನ ಪಂದ್ಯ ಸೋತರೂ ಲೀಗ್ ಹಂತದಲ್ಲಿ ಎರಡು ಪಂದ್ಯ ಗೆದ್ದ ಎಸ್‌ಆರ್‌ಎಂ ಚೆನ್ನೈ ತಂಡ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯ ರವಿರಾರ ನಡೆಯಲಿದೆ.
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ನ ನಾಲ್ಕನೇ ದಿನ ನಡೆದ ಮಹಿಳೆಯರ ಲೀಗ್ ಪಂದ್ಯದಲ್ಲಿ ಕೇರಳ ಪೊಲೀಸ್ ಎಸ್ಆರ್‌ಎಂ ತಂಡವನ್ನು ಪರಾಭವಗೊಳಿಸಿತು.
ರೋಶ್ನಾ ಜೋನ್, ಅಂಜುಮೋಳ್, ಲಿಬರೋ ಆರತಿ, ಅನಘ, ಅಂಜುಮೋಳ್ ಆಕರ್ಷಕ ಆಟದ ಪ್ರದರ್ಶನ ನೀಡಿದರೆ, ಎಸ್‌ಆರ್‌ಎಂ ಪರ ನಾಯಕಿ ಆದಿರಾ ರೋಯ್, ಅಕ್ಷಯ, ಅನಿತಾ ಆಂಟನಿ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದರು.







