ಚೆನ್ನೈ ಕಸ್ಟಡಿ ಸಾವಿನ ಪ್ರಕರಣ: ಕೊಲೆ ಆರೋಪದಲ್ಲಿ ಆರು ಪೊಲೀಸ್ ಸಿಬ್ಬಂದಿಗಳ ಬಂಧನ

ಸಾಂದರ್ಭಿಕ ಚಿತ್ರ
ಚೆನ್ನೈ,ಮೇ 7: ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಯುವಕನೋರ್ವನ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಕೊಲೆ ಆರೋಪದಲ್ಲಿ ಆರು ತಮಿಳುನಾಡು ಪೊಲೀಸ್ ಸಿಬ್ಬಂದಿಗಳನ್ನು ಶನಿವಾರ ಬಂಧಿಸಲಾಗಿದೆ. ಬಂಧಿತರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯನ್ನೂ ಹೇರಲಾಗಿದೆ.
ಈ ಮೊದಲು ಅನುಮಾನಾಸ್ಪದ ಸಾವಿನ ಕಲಮ್ ಗಳಡಿ ದಾಖಲಾಗಿದ್ದ ಪ್ರಕರಣವನ್ನು ಮರಣೋತ್ತರ ಪರೀಕ್ಷೆಯಲ್ಲಿ ಮೃತ ವಿಘ್ನೇಶ (25)ನ ಶರೀರದಲ್ಲಿ 13 ಗಾಯದ ಗುರುತುಗಳು ಪತ್ತೆಯಾದ ಬಳಿಕ ಕೊಲೆ ಪ್ರಕರಣವನ್ನಾಗಿ ಪರಿಷ್ಕರಿಸಲಾಗಿತ್ತು.
ಗಾಂಜಾವನ್ನು ಸಾಗಿಸುತ್ತಿದ್ದ ಮತ್ತು ಪೊಲೀಸ್ ಮೇಲೆ ದಾಳಿಗೆ ಪ್ರಯತ್ನಿಸಿದ್ದ ಆರೋಪದಲ್ಲಿ ಕಳೆದ ತಿಂಗಳು ಬಂಧಿಸಲ್ಪಟ್ಟಿದ್ದ ವಿಘ್ನೇಶ್ ಒಂದು ದಿನದ ಬಳಿಕ ಲಾಕಪ್ ನಲ್ಲಿ ಸಾವನ್ನಪ್ಪಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್-ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ಮತ್ತು ಹೋಮ್ ಗಾರ್ಡ್ ಸೇರಿದಂತೆ ಮೂವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಶುಕ್ರವಾರ ವಿಚಾರಣೆಗಾಗಿ ಹಲವಾರು ಪೊಲೀಸರನ್ನು ಕರೆಸಲಾಗಿತ್ತು.
ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಕುರಿತು ಪ್ರತಿಪಕ್ಷ ನಾಯಕ ಇ.ಕೆ.ಪಳನಿಸ್ವಾಮಿಯವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸುತ್ತಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಪ್ರತಿಪಕ್ಷ ನಾಯಕರು ಹೇಳಿರುವಂತೆ ಮರಣೋತ್ತರ ಪರೀಕ್ಷೆಯಲ್ಲಿ 13 ಗಾಯಗಳು ಕಂಡು ಬಂದಿವೆ. ಈ ಆಧಾರದಲ್ಲಿ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿದೆ ಮತ್ತು ಪೊಲೀಸರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯನ್ನು ಮುಂದುವರಿಸುವಂತೆ ಸಿಬಿ-ಸಿಐಡಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು. ಆದರೆ ಪ್ರತಿಪಕ್ಷವು ಸಿಬಿಐ ತನಿಖೆಗೆ ಆಗ್ರಹಿಸಿ ಸಭಾತ್ಯಾಗವನ್ನು ನಡೆಸಿತ್ತು.
ವಿಘ್ನೇಶನ ಶರೀರದಲ್ಲಿ ತಲೆ, ಕೆನ್ನೆ ಸೇರಿದಂತೆ ಹಲವಾರು ಕಡೆಗಳಲ್ಲಿ ಗಾಯಗಳಿದ್ದವು ಎಂದು ಮರಣೋತ್ತರ ಪರೀಕ್ಷೆಯ ವರದಿಯು ತಿಳಿಸಿದೆ. ಆದರೆ ಇತರ ಕೆಲವು ಪರೀಕ್ಷೆಗಳ ವರದಿಗಳು ಇನ್ನೂ ಕೈಸೇರಿಲ್ಲವಾದ್ದರಿಂದ ಸಾವಿಗೆ ಕಾರಣ ಇನ್ನಷ್ಟೇ ದೃಢಪಡಬೇಕಿದೆ.
ಕಸ್ಟಡಿಯಲ್ಲಿದ್ದಾಗ ವಿಘ್ನೇಶ್ ಸೆಳವುಗಳಿಗೆ ತುತ್ತಾಗಿದ್ದ ಮತ್ತು ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು,ಆದರೆ ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದರು.
ಕೆಲವು ದಿನಗಳ ಹಿಂದೆ ಬಹಿರಂಗಗೊಂಡಿರುವ ದೃಢಪಡದ ವೀಡಿಯೊವೊಂದು ಪೊಲೀಸರು ಬೆನ್ನಟ್ಟುತ್ತಿರುವಾಗ ವಿಘ್ನೇಶ್ ಎಡವಿ ಬಿದ್ದಿದ್ದನ್ನು ಮತ್ತು ಪೊಲೀಸನೋರ್ವ ಲಾಠಿಯಿಂದ ಥಳಿಸಿದ್ದನ್ನು ತೋರಿಸಿದೆ. ವಿಘ್ನೇಶ್ ಪರಾರಿಯಾಗುವ ಪ್ರಯತ್ನದಲ್ಲಿ ತಮ್ಮತ್ತ ಚೂರಿಯನ್ನು ಎಸೆದಿದ್ದ ಎಂದು ಪೊಲೀಸರು ಹೇಳಿಕೊಂಡಿದ್ದರು.
ವಿಘ್ನೇಶ್ ಗೆ ಚಿತ್ರಹಿಂಸೆಯನ್ನು ನೀಡಲಾಗಿತ್ತು ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪ್ರತ್ಯಕ್ಷದರ್ಶಿಯೋರ್ವರು ಆರೋಪಿಸಿದ್ದಾರೆ. ರಾತ್ರಿ 11ರಿಂದ ನಸುಕಿನ ಸುಮಾರು 3:30ರವರೆಗೆ ಪೊಲೀಸರು ಆತನನ್ನು ಥಳಿಸಿದ್ದರು ಎಂದು ಈ ವಿಷಯವನ್ನು ಕೈಗೆತ್ತಿಕೊಂಡಿರುವ ಮಾನವ ಹಕ್ಕು ಸಂಸ್ಥೆ ಪೀಪಲ್ಸ್ ವಾಚ್ ನ ಕಾರ್ಯಕಾರಿ ನಿರ್ದೇಶಕ ಹೆನ್ರಿ ಟಿಫಾಂಗೆ ಆಪಾದಿಸಿದ್ದಾರೆ.







