40 ಕೋ.ರೂ.ವಂಚನೆ ಪ್ರಕರಣ: ಆಪ್ ಶಾಸಕನ ನಿವಾಸ ಸೇರಿದಂತೆ ಮೂರು ಸ್ಥಳಗಳಲ್ಲಿ ಸಿಬಿಐ ಶೋಧ

ಹೊಸದಿಲ್ಲಿ,ಮೇ 7: 40 ಕೋ.ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ ಆಪ್ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಾಜರಾ ನಿವಾಸ ಸೇರಿದಂತೆ ಅವರಿಗೆ ಸೇರಿದ ಸಂಗ್ರೂರಿನ ಮೂರು ಸ್ಥಳಗಳಲ್ಲಿ ಶನಿವಾರ ಸಿಬಿಐ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.
ಬ್ಯಾಂಕ್ ಆಫ್ ಇಂಡಿಯಾಕ್ಕೆ 40 ಕೋ.ರೂ.ಗಳ ವಂಚನೆ ಕುರಿತು ಎಫ್ಐಆರ್ ದಾಖಲಾದ ಬಳಿಕ ನಡೆಸಲಾದ ಶೋಧ ಕಾರ್ಯಾಚರಣೆಗಳಲ್ಲಿ ವಿವಿಧ ವ್ಯಕ್ತಿಗಳ ಸಹಿಗಳನ್ನು ಹೊಂದಿರುವ ಮತ್ತು ಅವರ ಆಧಾರ ಕಾರ್ಡ್ ಗಳನ್ನು ಲಗತ್ತಿಸಿದ್ದ 94 ಖಾಲಿ ಚೆಕ್ ಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎನ್ನಲಾಗಿದೆ.
ಸುಮಾರು 16.57 ಲ.ರೂ.ನಗದು,ಸುಮಾರು 88 ವಿದೇಶಿ ಕರೆನ್ಸಿ ನೋಟುಗಳು, ಕೆಲವು ಆಸ್ತಿ ದಾಖಲೆಗಳು, ಹಲವಾರು ಬ್ಯಾಂಕ್ ಖಾತೆಗಳು ಮತ್ತು ಇತರ ಆಕ್ಷೇಪಾರ್ಹ ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರ ಆರ್.ಸಿ. ಜೋಶಿ ತಿಳಿಸಿದರು.
ಬ್ಯಾಂಕ್ ಆಫ್ ಇಂಡಿಯಾದ ದೂರಿನ ಮೇರೆಗೆ ಸಿಂಗ್, ಅವರ ಸೋದರರಾದ ಬಲವಂತ ಸಿಂಗ್ ಮತ್ತು ಕುಲವಂತ ಸಿಂಗ್, ಸೋದರಳಿಯ ತೇಜಿಂದರ್ ಸಿಂಗ್, ಮಾಲೇರ್ಕೋಟ್ಲಾದ ತಾರಾ ಕಾರ್ಪೊರೇಷನ್ ಲಿ.(ಈಗ ಮಲೌಧ ಆಗ್ರೊ ಲಿ.ಆಗಿದೆ) ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಕಂಪನಿಯ ಆಗಿನ ನಿರ್ದೇಶಕರು,ಖಾಸಗಿ ಕಂಪನಿಯೊಂದರ ಖಾತರಿದಾರರು, ತಾರಾ ಹೆಲ್ತ್ ಫುಡ್ಸ್ ಲಿ. ಮತ್ತು ಅಪರಿಚಿತ ಸರಕಾರಿ ಅಧಿಕಾರಿಗಳು/ಖಾಸಗಿ ವ್ಯಕ್ತಿಗಳು ಸೇರಿದಂತೆ ಹಲವಾರು ಜನರನ್ನೂ ಪ್ರಕರಣದಲ್ಲಿ ಹೆಸರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.







