ಮತ್ತೆ ಕ್ಷಿಪಣಿ ಪರೀಕ್ಷೆ ನಡೆಸಿದ ಉ.ಕೊರಿಯಾ

REUTERS
ಪ್ಯೋಂಗ್ಯಾಂಗ್, ಮೇ 7: ಉತ್ತರ ಕೊರಿಯಾವು ಮತ್ತೊಂದು ಪ್ರಕ್ಷೇಪಕ ಕ್ಷಿಪಣಿಯನ್ನು ಪರೀಕ್ಷೆ ನಡೆಸಿದ್ದು ಇದು ಸಬ್ಮೆರಿನ್ ನಿಂದ ಉಡಾಯಿಸಬಹುದಾದ ಕ್ಷಿಪಣಿ ಆಗಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯೂನ್ ಸುಕ್ ಇಯೋಲ್ ಅವರ ಪದಗ್ರಹಣದ ಮೂರು ದಿನದ ಮೊದಲು, ಉತ್ತರಕೊರಿಯಾದ ಸಿಂಪೊ ಬಂದರಿನಿಂದ ಶನಿವಾರ ಬೆಳಿಗ್ಗೆ ಸುಮಾರು 5 ಗಂಟೆಗೆ ಕ್ಷಿಪಣಿಯ ಪರೀಕ್ಷಾ ಪ್ರಯೋಗ ನಡೆದಿದೆ ಎಂದವರು ಹೇಳಿದ್ದಾರೆ.
ಉತ್ತರ ಕೊರಿಯಾ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷೆ ನಡೆಸಿರುವ ಸಾಧ್ಯತೆಯಿದೆ. ಕ್ಷಿಪಣಿಯು ತನ್ನ ವಿಶೇಷ ಆರ್ಥಿಕ ವಲಯದ ಹೊರಭಾಗಕ್ಕೆ ಅಪ್ಪಳಿಸಿದೆ. ಇದು ಖಂಡಿತಾ ಸ್ವೀಕಾರಾರ್ಹವಲ್ಲ ಎಂದು ಜಪಾನ್ ರಕ್ಷಣಾ ಇಲಾಖೆ ಹೇಳಿದೆ.
ಭೂಮಿಗಿಂತ ಸುಮಾರು 60 ಕಿ.ಮೀ ಎತ್ತರದಲ್ಲಿ ಹಾರಬಲ್ಲ, ಸುಮಾರು 600 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲ ಕ್ಷಿಪಣಿ ಇದಾಗಿದೆ ಎಂದು ಜಪಾನ್ ಮತ್ತು ದಕ್ಷಿಣ ಕೊರಿಯಾ ಅಂದಾಜಿಸಿವೆ. ಎಲ್ಲಾ ಅನಿರೀಕ್ಷಿತ ಸನ್ನಿವೇಶಗಳಿಗೆ ಸಿದ್ಧವಾಗಿರುವಂತೆ ಮತ್ತು ವಿಮಾನ ಮತ್ತು ಹಡಗುಗಳ ಸುರಕ್ಷತೆಯನ್ನು ಭದ್ರಪಡಿಸುವಂತೆ ಅಧಿಕಾರಿಗಳಿಗೆ ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ ಆದೇಶಿಸಿದ್ದಾರೆ.
ತನ್ನ ಪರಮಾಣು ಶಕ್ತಿಯನ್ನು ಗರಿಷ್ಟಸಾಧ್ಯ ವೇಗದಲ್ಲಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿರುವ ಉತ್ತರ ಕೊರಿಯಾ 3 ದಿನದ ಹಿಂದೆ ದೇಶದ ಪೂರ್ವ ಕರಾವಳಿಯಿಂದ ಸಮುದ್ರದತ್ತ ಪ್ರಕ್ಷೇಪಕ ಕ್ಷಿಪಣಿಯನ್ನು ಪರೀಕ್ಷಾ ಪ್ರಯೋಗ ನಡೆಸಿದೆ. ಶನಿವಾರ ನಡೆಸಿದ ಪರೀಕ್ಷೆ ಈ ವರ್ಷದ 15ನೇ ಕ್ಷಿಪಣಿ ಪರೀಕ್ಷೆಯಾಗಿದೆ. 2017ರಲ್ಲಿ ಉತ್ತರಕೊರಿಯಾ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದು ಇದು ಅಮೆರಿಕವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ.
ದಕ್ಷಿಣ ಕೊರಿಯಾದ ನೂತನ ಆಡಳಿತಕ್ಕೆ ಒಂದು ಸಂದೇಶ ರವಾನಿಸುವ ಉದ್ದೇಶ ಈ ಕ್ಷಿಪಣಿ ಪರೀಕ್ಷೆಯ ಉದ್ದೇಶವಾಗಿದೆ. ಎಚ್ಚರಿಕೆಯ ಸಂದೇಶದ ಜತೆ ಬೆದರಿಕೆಯ ಸಂದೇಶ ರವಾನಿಸುವ ತಂತ್ರವನ್ನು ಉತ್ತರ ಕೊರಿಯಾ ಈ ಹಿಂದಿನಿಂದಲೂ ನಡೆಸಿಕೊಂಡು ಬಂದಿದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.







