ಉಕ್ರೇನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರಕ್ಕೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಕರೆ

UN COUCIL
ವಿಶ್ವಸಂಸ್ಥೆ, ಮೇ 7: ಉಕ್ರೇನ್ ಮೇಲಿನ ರಶ್ಯದ ಆಕ್ರಮಣಕ್ಕೆ ಸಂಬಂಧಿಸಿ ತನ್ನ ಪ್ರಥಮ ಹೇಳಿಕೆ ಬಿಡುಗಡೆಗೊಳಿಸಿರುವ ವಿಶ್ವಸಂಸ್ಥೆಯ ಭದ್ರತಾ ಸಮಿತಿ , ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಹುಡುಕಲು ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ನಡೆಸುತ್ತಿರುವ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಹೇಳಿದೆ. ಆದರೆ, ಹೇಳಿಕೆಯಲ್ಲಿ ‘ಯುದ್ಧ, ಆಕ್ರಮಣ, ಸಂಘರ್ಷ’ ಪದಗಳನ್ನು ಬಳಸದಂತೆ ಎಚ್ಚರಿಕೆ ವಹಿಸಿದೆ.
ಈ ಹೇಳಿಕೆಗೆ ಸರ್ವಾನುಮತದ ಸಹಮತ ವ್ಯಕ್ತವಾಗಿದೆ. ಶುಕ್ರವಾರ ಅನುಮೋದಿಸಲಾಗದ ಸಂಕ್ಷಿಪ್ತ ಹೇಳಿಕೆಯನ್ನು ನಾರ್ವೆ ಮತ್ತು ಮೆಕ್ಸಿಕೋ ರಚಿಸಿದೆ. ಈ ಹೇಳಿಕೆಗೆ ರಶ್ಯ ಕೂಡಾ ಸಹಮತ ವ್ಯಕ್ತಪಡಿಸಿರುವುದು ವಿಶೇಷವಾಗಿದೆ. ಈ ಹೇಳಿಕೆಯು ಪ್ರಥಮ ಹೆಜ್ಜೆಯಾಗಿದೆ, ಆದರೆ ಇದರ ಅಂಶಗಳು ಸರಿಯಾದ ದಿಕ್ಕಿನಲ್ಲಿವೆ. ರಾಜತಂತ್ರಕ್ಕೆ ಈಗಲೂ ಭದ್ರತಾ ಸಮಿತಿಯಲ್ಲಿ ಸ್ಥಾನವಿದೆ ಮತ್ತು ಬಹಳಷ್ಟು ಹೇಳಿಕೆಯ ಬದಲು ಮೌನವಾದ ರಾಜತಂತ್ರ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ವಿಶ್ವಸಂಸ್ಥೆಯಲ್ಲಿನ ಮೆಕ್ಸಿಕೋದ ರಾಯಭಾರಿ ಜುವಾನ್ ರೆಮೊನ್ ಡೆಲಫ್ಯುಯೆಂಟ್ ಹೇಳಿದ್ದಾರೆ.
ಉಕ್ರೇನ್ ನಲ್ಲಿ ಯುದ್ಧ ಆರಂಭವಾದ ಬಳಿಕ ಈ ವಿಷಯದಲ್ಲಿ ವಿಶ್ವಸಂಸ್ಥೆ ಕೈಗೊಂಡಿರುವ ಪ್ರಪ್ರಥಮ ಸರ್ವಾನುತಮದ ನಿರ್ಣಯ ಇದಾಗಿದೆ. ಉಕ್ರೇನ್ ನ ಜನತೆ ಅನುಭವಿಸುತ್ತಿರುವ ತೊಂದರೆ, ಯಾತನೆಗೆ ಅಂತ್ಯಹಾಡುವ ಪ್ರಯತ್ನಕ್ಕೆ ವಿಶ್ವಸಂಸ್ಥೆ ಭದ್ರತಾ ಸಮಿತಿ, ವಿಶ್ವಸಂಸ್ಥೆ , ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ಗರಿಷ್ಟ ಪ್ರಯತ್ನದ ಅಗತ್ಯವಿದೆ ಎಂದು ವಿಶ್ವಸಂಸ್ಥೆಯಲ್ಲಿನ ನಾರ್ವೆ ರಾಯಭಾರಿ ಮೋನಾ ಜೂಲ್ ಹೇಳಿದ್ದಾರೆ.
‘ಉಕ್ರೇನ್ನಲ್ಲಿ ಶಾಂತಿ ಮತ್ತು ಭದ್ರತೆಯ ನಿರ್ವಹಣೆಯ ಬಗ್ಗೆ ಭದ್ರತಾ ಸಮಿತಿ ತೀವ್ರ ಕಾಳಜಿ ವ್ಯಕ್ತಪಡಿಸುತ್ತದೆ. ವಿಶ್ವಸಂಸ್ಥೆಯ ಸನ್ನದಿನ(ಹಕ್ಕುಪತ್ರದ) ಅಡಿಯಲ್ಲಿ ಎಲ್ಲಾ ಸದಸ್ಯ ದೇಶಗಳು ತಮ್ಮ ಅಂತರಾಷ್ಟ್ರೀಯ ವಿವಾದವನ್ನು ಶಾಂತಿಯುತ ವಿಧಾನಗಳಿಂದ ಇತ್ಯರ್ಥಪಡಿಸುವ ಜವಾಬ್ದಾರಿಗೆ ಬದ್ಧವಾಗಿವೆ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತೇವೆ. ಶಾಂತಿಯುತ ಪರಿಹಾರಕ್ಕೆ ಪ್ರಧಾನ ಕಾರ್ಯದರ್ಶಿ ನಡೆಸುತ್ತಿರುವ ಪ್ರಯತ್ನಗಳಿಗೆ ಭದ್ರತಾ ಸಮಿತಿ ಸದೃಢ ಬೆಂಬಲ ನೀಡುತ್ತದೆ ಎಂದು ಹೇಳಿಕೆ ತಿಳಿಸಿದೆ. ಅಲ್ಲದೆ, ಸೂಕ್ತ ಸಂದರ್ಭದಲ್ಲಿ ಭದ್ರತಾ ಸಮಿತಿಗೆ ವಿವರ ಒದಗಿಸುವಂತೆ ಗುಟೆರಸ್ರನ್ನು ವಿನಂತಿಸಿದೆ.
ಕಳೆದ ವಾರ ರಶ್ಯ ಅಧ್ಯಕ್ಷ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಗುಟೆರಸ್, ಜೀವಗಳನ್ನು ಉಳಿಸಲು, ಶಾಂತಿಯ ಮಾರ್ಗವನ್ನು ಕಂಡುಕೊಳ್ಳಲು ಎಲ್ಲಾ ಪ್ರಯತ್ನವನ್ನೂ ಮಾಡುವುದಾಗಿ ಹೇಳಿದ್ದಾರೆ.







