ಸಾವಿರ ರೂ. ಗಡಿ ದಾಟಿದ ಎಲ್‍ಪಿಜಿ ಸಿಲಿಂಡರ್ ದರ

ಹೊಸದಿಲ್ಲಿ: ಜನಸಾಮಾನ್ಯರು ಬಳಸುವ ಎಲ್‍ಪಿಜಿ ಸಿಲಿಂಡರ್ ದರ ದೇಶದ ಹಲವು ನಗರಗಳಲ್ಲಿ ಸಾವಿರದ ಗಡಿ ದಾಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಸಿಲಿಂಡರ್ ದರ ರೂ. 1000 ತಲುಪಲು 50 ಪೈಸೆಯಷ್ಟೇ ಬಾಕಿ.
ಮಾರ್ಚ್ 22ರಿಂದೀಚೆಗೆ ಎರಡನೇ ಬಾರಿ ಸಿಲಿಂಡರ್ ದರವನ್ನು ಸರ್ಕಾರ 50 ರೂಪಾಯಿಗಳಷ್ಟು ಹೆಚ್ಚಿಸಿರುವುದು ಇದಕ್ಕೆ ಕಾರಣ. ಇದು ಇಂಧನ, ಖಾದ್ಯತೈಲ ಮತ್ತು ಇತರ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇತ್ತೀಚೆಗೆ ದರ ಏರಿಸಿದ ಬಳಿಕ ದೆಹಲಿಯಲ್ಲಿ ಗೃಹಬಳಕೆಯ ಎಲ್‍ಪಿಜಿ ರೀಫಿಲ್ ದರ 999.50 ರೂಪಾಯಿ ಆಗಿದೆ. ಮುಂಬೈನಲ್ಲಿ ಇದು 1026 ರೂಪಾಯಿ ಆಗಿದ್ದರೆ, ಚೆನ್ನೈನಲ್ಲಿ 1015 ರೂಪಾಯಿ. ಆಯಾ ರಾಜ್ಯಗಳ ತೆರಿಗೆಗಳಿಗೆ ಅನುಸಾರವಾಗಿ ರೀಫಿಲ್ ದರಗಳು ಬದಲಾಗುತ್ತವೆ.
ಇತ್ತೀಚಿನ ಏರಿಕೆಯ ಬಳಿಕ ಹಲವು ನಗರಗಳಲ್ಲಿ ಸಿಲಿಂಡರ್ ದರ 1000ದ ಗಡಿ ದಾಟಿದೆ. ಸರ್ಕಾರ ಎಲ್‍ಪಿಜಿ ಮೇಲಿನ ಸಬ್ಸಿಡಿಯನ್ನೂ ಕಿತ್ತುಹಾಕಿರುವುದು ಗ್ರಾಹಕರ ಮೇಲಿನ ಹೊರೆಯನ್ನು ಹೆಚ್ಚಿಸಿದೆ. 2020ರ ಮೇ ತಿಂಗಳಲ್ಲಿ ಜಾಗತಿಕ ಇಂಧನ ಬೆಲೆಗಳು ಕೋವಿಡ್-19 ಸಾಂಕ್ರಾಮಿಕದ ಕಾರಣ ಕುಸಿದ ಪ್ರಯೋಜನವನ್ನು ಪಡೆದುಕೊಂಡು ಸರ್ಕಾರ ಎಲ್‍ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಕಿತ್ತುಹಾಕಿತ್ತು.
2020ರ ಜನವರಿ 1ರ ವೇಳೆಗೆ ದೆಹಲಿಯಲ್ಲಿ ಎಲ್‍ಪಿಜಿ ಸಿಲಿಂಡರ್ ದರ 714 ರೂಪಾಯಿ ಆಗಿತ್ತು.
ಗ್ರಾಹಕರ ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಸರ್ಕಾರ ನಿಯಂತ್ರಿಸುತ್ತದೆ. ಆದರೆ ವಾಣಿಜ್ಯ ಬಳಕೆಯ 19 ಕೆಜಿ ರೀಫಿಲ್ ಸಿಲಿಂಡರ್‍ನ ಬೆಲೆ ಮಾರುಕಟ್ಟೆ ಬೇಡಿಕೆಗೆ ಅನುಸಾರವಾಗಿ ನಿರ್ಧಾರವಾಗುತ್ತದೆ.







