ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಕಿರುಕುಳ: ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಉತ್ತರ ಪ್ರದೇಶದ ಲಾತಿಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಿ, ಚಿತ್ರಹಿಂಸೆ ನೀಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಉತ್ತರ ಪ್ರದೇಶ ಸರ್ಕಾರಕ್ಕೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ.
ಪೊಲೀಸ್ ಅಧಿಕಾರಿ ಹಾಗೂ ಆತನ ಕುಟುಂಬದವರು ತಮ್ಮ ಹುದ್ದೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೇ, ಸಂತ್ರಸ್ತೆಗೆ ದೈಹಿಕ ಚಿತ್ರಹಿಂಸೆ ನೀಡಿದ್ದಾಗಿ ಮಾನವ ಹಕ್ಕುಗಳ ಆಯೋಗ ಅಭಿಪ್ರಾಯಪಟ್ಟಿದೆ.
ಮಹಿಳೆಗೆ ಕಿರುಕುಳ ನೀಡಿದ ಸಂಬಂಧದ ಮಾಧ್ಯಮ ವರದಿಗಳನ್ನು ಗಮನಿಸಿ, ಎನ್ಎಚ್ಆರ್ಸಿ ಸ್ವಯಂಪ್ರೇರಿತ ವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಈ ಮಹಿಳೆ ಪೊಲೀಸ್ ಅಧಿಕಾರಿಯ ಮನೆಗೆಲಸದಾಕೆ ಎನ್ನಲಾಗಿದೆ.
ಎನ್ಎಚ್ಆರ್ಸಿ ಆಯುಕ್ತರು ಪ್ರಕರಣದ ಸಂಬಂಧ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ನೀಡಿದ್ದು, ಈ ಬಗ್ಗೆ ನಾಲ್ಕು ವಾರಗಳ ಒಳಗಾಗಿ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಕಾರಣವಾದ ಪೊಲೀಸ್ ಅಧಿಕಾರಿಯ ವಿರುದ್ಧ ಕೈಗೊಳ್ಳಲಾದ ಕ್ರಮ ಮತ್ತು ಮಹಿಳೆಗೆ ನೀಡಿದ ಪರಿಹಾರದ ಬಗ್ಗೆಯೂ ವಿವರ ನೀಡುವಂತೆ ಆದೇಶಿಸಿದೆ.







