ಐಪಿಎಲ್ 2022 ರಿಂದ ದೂರ ಉಳಿಯಲು ಕ್ರಿಸ್ ಗೇಯ್ಲ್ ನೀಡಿದ ಕಾರಣವೇನು?

ಲಂಡನ್: 2022 ನೇ ಸಾಲಿನ ಐಪಿಎಲ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ಕ್ರಿಸ್ ಗೇಲ್ ಆಡದಿರುವ ಕಾರಣವನ್ನು ಸ್ವತಃ ಅವರೇ ಹೊರ ಹಾಕಿದ್ದಾರೆ. ಐಪಿಎಲ್ ಸರಣಿಯಲ್ಲಿ ತಮ್ಮ ಬ್ಯಾಟಿಂಗ್ ಶೈಲಿಯಿಂದ ಅಭಿಮಾನಿಗಳನ್ನು ಇದುವರೆಗೂ ರಂಜಿಸಿದ್ದ ಗೇಯ್ಲ್, ಈ ಸರಣಿಯ ಹರಾಜಿಗೆ ಹೆಸರು ನೋಂದಾಯಿಸದೆ ಹೊರ ಉಳಿದಿದ್ದರು.
ಯುನೈಟೆಡ್ ಕಿಂಗ್‌ಡಮ್‌ನ ʼಮಿರರ್ʼ (mirror.co.uk) ಜೊತೆ ಮಾತನಾಡಿದ ಗೇಯ್ಲ್, ʼಐಪಿಎಲ್ ನ ಕಳೆದ ಕೆಲವು ಸರಣಿಯಲ್ಲಿ ತನಗೆ ಅರ್ಹವಾದ ಗೌರವ ಸಿಕ್ಕಿಲ್ಲ ಹಾಗೂ ತನ್ನನ್ನು ಸರಿಯಾಗಿ ಪರಿಗಣಿಸಲಿಲ್ಲ ಹಾಗಾಗಿ ಈ ಬಾರಿಯ ಸರಣಿಯಿಂದ ದೂರ ಉಳಿದಿರುವುದಾಗಿʼ ತಿಳಿಸಿದ್ದಾರೆ.
“ಕ್ರೀಡೆಗಾಗಿ ಮತ್ತು ಐಪಿಎಲ್‌ಗಾಗಿ ನಾನು ಇಷ್ಟೆಲ್ಲಾ ಮಾಡಿದ ಹೊರತಾಗಿಯೂ ಕಳೆದ ಎರಡು ಸೀಸನ್‌ನಲ್ಲಿ ಸರಿಯಾದ ಮನ್ನಣೆ ಸಿಗಲಿಲ್ಲ. ಸರಿ, ಹಾಗಾಗಿ ಈ ಬಾರಿ (ಹರಾಜಿಗೆ) ನೋಂದಾಯಿಸಿಕೊಳ್ಳಲು ಚಿಂತಿಸಲಿಲ್ಲ. ಹಾಗಾಗಿ ನಾನು ಅದನ್ನು ಅಲ್ಲಿಗೆ ಬಿಟ್ಟಿದ್ದೇನೆ. ಕ್ರಿಕೆಟ್ ನಂತರದ ಜೀವನ ಯಾವಾಗಲೂ ಇರುತ್ತದೆ, ನಾನು ಸಾಮಾನ್ಯ ಜೀವನಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ” ಎಂದು ಗೇಯ್ಲ್ ತಿಳಿಸಿದ್ದಾರೆ.
ಅದಾಗ್ಯೂ, ಮುಂದಿನ ವರ್ಷಗಳಲ್ಲಿ ಹಿಂತಿರುಗುವ ಬಗ್ಗೆ ಗೇಯ್ಲ್ ಸೂಚನೆ ನೀಡಿದ್ದಾರೆ. “ಮುಂದಿನ ವರ್ಷ ನಾನು ಹಿಂತಿರುಗುತ್ತೇನೆ, ಅವರಿಗೆ ನಾನು ಬೇಕು!” ಎಂದು ಗೇಯ್ಲ್ ಹೇಳಿದ್ದಾರೆ.
“ನಾನು ಐಪಿಎಲ್, ಕೋಲ್ಕತ್ತಾ, ಆರ್‌ಸಿಬಿ ಮತ್ತು ಪಂಜಾಬ್‌ನಲ್ಲಿ ಮೂರು ತಂಡಗಳನ್ನು ಪ್ರತಿನಿಧಿಸಿದ್ದೇನೆ. RCB ಮತ್ತು ಪಂಜಾಬ್ ನಡುವೆ, ಆ ಎರಡು ತಂಡಗಳಲ್ಲಿ ಒಂದರೊಂದಿಗೆ ಕಪ್ ಗೆಲ್ಲಲು ನಾನು ಇಷ್ಟಪಡುತ್ತೇನೆ. ನಾನು RCB ಯೊಂದಿಗೆ ಉತ್ತಮ ಅವಧಿಯನ್ನು ಹೊಂದಿದ್ದೇನೆ, ಅಲ್ಲಿ ನಾನು ಹೆಚ್ಚು ಯಶಸ್ವಿಯಾಗಿದ್ದೆ, ಪಂಜಾಬ್ ಉತ್ತಮವಾಗಿದೆ. ನಾನು ಇನ್ನಷ್ಟು ಸಾಧ್ಯತೆಗಳನ್ನು ಅನ್ವೇಷಿಸಲು ಇಷ್ಟಪಡುತ್ತೇನೆ ಮತ್ತು ನಾನು ಸವಾಲುಗಳನ್ನು ಪ್ರೀತಿಸುತ್ತೇನೆ, ಆದ್ದರಿಂದ (ಮುಂದೆ) ಏನಾಗುತ್ತದೆ ಎಂದು ನೋಡೋಣ.” ಎಂದು ಗೇಯ್ಲ್ ಹೇಳಿದ್ದಾರೆ.