ಸುಪ್ರೀಂ ಕೋರ್ಟ್ ಚಾಟಿಯ ಬಳಿಕ ದಿಲ್ಲಿ ಪೊಲೀಸರಿಂದ ಚಾವಂಕೆ ವಿರುದ್ಧ ಹೊಸ ದ್ವೇಷಭಾಷಣ ಪ್ರಕರಣ ದಾಖಲು

Photo: Facebook/SureshChavhanke
ಹೊಸದಿಲ್ಲಿ,ಮೇ 8: ಕಳೆದ ವರ್ಷದ ಡಿಸೆಂಬರ್ನಲ್ಲಿ ದಿಲ್ಲಿಯಲ್ಲಿ ಹಿಂದು ಯುವವಾಹಿನಿಯ ಕಾರ್ಯಕ್ರಮದಲ್ಲಿ ಮಾಡಿದ್ದ ದ್ವೇಷಭಾಷಣಕ್ಕೆ ಸಂಬಂಧಿಸಿದಂತೆ ಸುದರ್ಶನ ಟಿವಿಯ ಮುಖ್ಯಸ್ಥ ಸುರೇಶ್ ಚಾವಂಕೆ ವಿರುದ್ಧ ದಿಲ್ಲಿ ಪೊಲೀಸರು ಹೊಸ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸರ್ವೋಚ್ಚ ನ್ಯಾಯಾಲಯವು ಕಾರ್ಯಕ್ರಮದಲ್ಲಿ ದ್ವೇಷ ಭಾಷಣವನ್ನು ಮಾಡಲಾಗಿರಲಿಲ್ಲ ಎಂದು ಸಲ್ಲಿಸಲಾಗಿದ್ದ ಪ್ರಮಾಣಪತ್ರಕ್ಕಾಗಿ ಎ.22ರಂದು ದಿಲ್ಲಿ ಪೊಲೀಸರನ್ನು ತರಾಟೆಗೆತ್ತಿಕೊಂಡಿತ್ತು. ‘ತಮ್ಮ ಸಮುದಾಯದ ನೈತಿಕತೆಯನ್ನು ರಕ್ಷಿಸಲು ’ ಪ್ರೇರೇಪಿಸಲ್ಪಟ್ಟ ಜನರು ಸಮಾವೇಶದಲ್ಲಿ ಸೇರಿದ್ದರು ಎಂದು ಪೊಲೀಸರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.
2021,ಡಿ.19ರಂದು ಹಿಂದು ಯುವವಾಹಿನಿಯ ಕಾರ್ಯಕ್ರಮದಲ್ಲಿ ಚಾವಂಕೆ ಭಾರತವನ್ನು ‘ಹಿಂದು ರಾಷ್ಟ್ರ’ವನ್ನಾಗಿ ಮಾಡಲು ‘ಸಾಯಲು ಅಥವಾ ಕೊಲ್ಲಲು’ ಜನರ ಗುಂಪೊಂದಕ್ಕೆ ಪ್ರಮಾಣವಚನವನ್ನು ಬೋಧಿಸುತ್ತಿದ್ದುದು ವೀಡಿಯೊದಲ್ಲಿ ಕಂಡು ಬಂದಿತ್ತು ಮತ್ತು ಈ ವೀಡಿಯೊವನ್ನು ಸ್ವತಃ ಚಾವಂಕೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಆಗ್ನೇಯ ದಿಲ್ಲಿಯ ಡಿಸಿಪಿ ಇಶಾ ಪಾಂಡೆಯವರು ಹಿಂದಿನ ವಿವಾದಾತ್ಮಕ ಅಫಿಡವಿಟ್ನಲ್ಲಿ,ಕಾರ್ಯಕ್ರಮಗಳಲ್ಲಿ ಮಾಡಲಾಗಿದ್ದ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಸೃಷ್ಟಿಸುವ ಯಾವುದೇ ಪದಗಳನ್ನು ಬಳಸಲಾಗಿರಲಿಲ್ಲ. ಮುಸ್ಲಿಮರ ನರಮೇಧಕ್ಕೆ ಮುಕ್ತ ಕರೆಗಳು ಎಂದು ಅರ್ಥೈಸಬಹುದಾದ ಅಥವಾ ವ್ಯಾಖ್ಯಾನಿಸಬಹುದಾದ ಯಾವುದೇ ಶಬ್ದಗಳ ಬಳಕೆಯಾಗಿರಲಿಲ್ಲ ’ಎಂದು ಹೇಳಿದ್ದರು.
ಮೂಲಭೂತ ವಾಕ್ ಸ್ವಾತಂತ್ರವು ಸಮುದಾಯದ ಹಿತಾಸಕ್ತಿಗಳಿಗೆ ಬೆದರಿಕೆಯೊಡ್ಡದಿದ್ದರೆ ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದೂ ಪೊಲೀಸರು ತಿಳಿಸಿದ್ದರು.
ಅಫಿಡವಿಟ್ನಲ್ಲಿಯ ನಿಲುವಿನ ಬಗ್ಗೆ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಪೊಲೀಸರು ತಾವು ಅಫಿಡವಿಟ್ನಲ್ಲಿ ಏನು ಹೇಳಬೇಕು ಎಂದು ಲೆಕ್ಕಹಾಕುವಾಗ ನಿಜವಾಗಿಯೂ ವಿವೇಚನೆಯನ್ನು ಬಳಸಿದ್ದರೇ ಎಂದು ಪ್ರಶ್ನಿಸಿತ್ತು. ಬಳಿಕ ‘ಉತ್ತಮ ಅಫಿಡವಿಟ್’ ಅನ್ನು ಸಲ್ಲಿಸುವುದಾಗಿ ಪೊಲೀಸರು ಒಪ್ಪಿಕೊಂಡಿದ್ದರು.
ಐಪಿಸಿಯ 153 ಎ (ಧರ್ಮ,ಜನಾಂಗ,ಜನ್ಮ ಇತ್ಯಾದಿಗಳ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು),295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳು),298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಶಬ್ದಗಳನ್ನು ಉಚ್ಚರಿಸುವುದು) ಮತ್ತು 34 (ಸಾಮಾನ್ಯ ಉದ್ದೇಶವನ್ನು ಸಾಧಿಸಲು ಹಲವಾರು ವ್ಯಕ್ತಿಗಳ ಕೃತ್ಯಗಳು)ನೇ ಕಲಮ್ಗಳಡಿ ಓಖ್ಲಾ ಕೈಗಾರಿಕಾ ಪ್ರದೇಶ ಪೊಲೀಸ್ ಠಾಣೆಯಲ್ಲಿ ಮೇ 4ರಂದು ಎಫ್ಐಆರ್ನ್ನು ದಾಖಲಿಸಲಾಗಿದೆ ಎಂದು ಹೊಸ ಅಫಿಡವಿಟ್ನಲ್ಲಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಮೇ 9ರಂದು ನಡೆಯಲಿದೆ.







