ದಿಲ್ಲಿ ಹಿಂಸಾಚಾರ: ಮೆರವಣಿಗೆ ನಿಲ್ಲಿಸುವಲ್ಲಿ ಸಂಪೂರ್ಣ ವೈಫಲ್ಯ; ದಿಲ್ಲಿ ಪೊಲೀಸರಿಗೆ ನ್ಯಾಯಾಲಯದ ಛೀಮಾರಿ

ಹೊಸದಿಲ್ಲಿ,ಮೇ 8: ವಾಯುವ್ಯ ದಿಲ್ಲಿಯ ಜಹಾಂಗೀರ್ಪುರಿಯಲ್ಲಿ ಇತ್ತೀಚಿಗೆ ಸಂಭವಿಸಿದ್ದ ಕೋಮು ಘರ್ಷಣೆಗಳಲ್ಲಿ ಭಾಗಿಯಾಗಿದ್ದ ಎಂಟು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿಯ ನ್ಯಾಯಾಲಯವು ತಿರಸ್ಕರಿಸಿದ್ದು, ಅವರ ಬಿಡುಗಡೆಯು ಸಾಕ್ಷಿಗಳಿಗೆ ಬೆದರಿಕೆಯನ್ನೊಡ್ಡಬಹುದು ಎಂದು ಹೇಳಿದೆ. ಕಾನೂನುಬಾಹಿರ ಮೆರವಣಿಗೆಯನ್ನು ತಡೆಯದಿದ್ದಕ್ಕಾಗಿ ದಿಲ್ಲಿ ಪೊಲೀಸರಿಗೆ ಛೀಮಾರಿಯನ್ನು ಹಾಕಿದ ನ್ಯಾಯಾಲಯವು, ಈ ಬಗ್ಗೆ ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹೊಣೆಗಾರಿಕೆಯನ್ನು ನಿಗದಿಗೊಳಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಆದೇಶಿಸಿದೆ.
ಕಳೆದ ತಿಂಗಳು ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಜಹಾಂಗೀರ್ಪುರಿಯಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 20 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ಎಂಟು ಪೊಲೀಸರು ಮತ್ತು ಓರ್ವ ನಾಗರಿಕ ಗಾಯಗೊಂಡಿದ್ದರು. ಪೊಲೀಸರ ಅನುಮತಿಯಿಲ್ಲದೆ ಮೆರವಣಿಗೆಯನ್ನು ಹೊರಡಿಸಲಾಗಿತ್ತು ಮತ್ತು ಪೊಲೀಸರ ಸಮ್ಮುಖದಲ್ಲಿಯೇ ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಂದಿಗೆ ವಾಗ್ವಾದ ನಡೆದಿತ್ತು ಎನ್ನುವುದು ನಂತರ ಬೆಳಕಿಗೆ ಬಂದಿತ್ತು.ಕಾನೂನುಬಾಹಿರ ಮೆರವಣಿಗೆಯನ್ನು ನಿಲ್ಲಿಸಿ ಗುಂಪನ್ನು ಚದುರಿಸುವ ಬದಲು ಪೊಲೀಸ್ ಅಧಿಕಾರಿಗಳು ಮೆರವಣಿಗೆಯೊಂದಿಗೆ ಸಾಗಿದ್ದು ಕಂಡುಬಂದಿದೆ ಎಂದು ನ್ಯಾಯಾಲಯವು ಹೇಳಿದೆ.
ಇನ್ಸ್ಪೆಕ್ಟರ್ ರಾಜೀವ ರಂಜನ್ ಮತ್ತು ಇತರ ಅಧಿಕಾರಿಗಳ ನೇತೃತ್ವದಲ್ಲಿ ಜಹಾಂಗೀರ್ಪುರಿ ಠಾಣೆಯ ಪೊಲೀಸರು ಕಾನೂನುಬಾಹಿರ ಮರವಣಿಗೆಯ ಜೊತೆಯಲ್ಲಿದ್ದರು ಎನ್ನುವುದನ್ನು ಖುದ್ದು ಎಫ್ಐಆರ್ನಲ್ಲಿಯ ವಿಷಯಗಳು ತೋರಿಸಿವೆ ಎಂದು ಬೆಟ್ಟು ಮಾಡಿದ ನ್ಯಾಯಾಧೀಶರು,ಇದು ಅನುಮತಿಯಿರದಿದ್ದ ಮೆರವಣಿಗೆಯನ್ನು ನಿಲ್ಲಿಸುವಲ್ಲಿ ಪೊಲೀಸರ ಸಂಪೂರ್ಣ ವೈಫಲ್ಯವನ್ನು ಮೇಲ್ನೋಟಕ್ಕೆ ತೋರಿಸುತ್ತದೆ ಎಂದು ಹೇಳಿದರು.
ಹಿರಿಯ ಅಧಿಕಾರಿಗಳು ವಿಷಯವನ್ನು ಉಪೇಕ್ಷಿಸಿರುವಂತೆ ಕಾಣುತ್ತಿದೆ ಎಂದೂ ಅವರು ತಿಳಿಸಿದರು.
ಹಿರಿಯ ಪೊಲೀಸ್ ಅಧಿಕಾರಿ ದೀಪೇಂದ್ರ ಪಾಠಕ್ ಅವರು ಎ.19ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ,ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಪೊಲೀಸರ ಹೊಣೆಗಾರಿಕೆಯಾಗಿದೆ ಎಂದು ಹೇಳುವ ಮೂಲಕ ಮೆರವಣಿಗೆ ವೇಳೆ ಪೊಲೀಸರ ಉಪಸ್ಥಿತಿಗೆ ವಿವರಣೆಯನ್ನು ನೀಡಿದ್ದರು.‘ಪರಿಸ್ಥಿತಿಯು ಸೂಕ್ಷವಾಗಿದ್ದರೆ ಮತ್ತು ಜನರು ಗುಂಪು ಸೇರಿದ್ದರೆ ಅದು ಇನ್ನಷ್ಟು ಹದಗೆಡದಂತೆ ನಾವು ನೋಡಿಕೊಳ್ಳಬೇಕಾಗುತ್ತದೆ. ಇದೇ ಕಾರಣದಿಂದ ಅಲ್ಲಿ ನಾವು ಸಾಕಷ್ಟು ಪೊಲೀಸರನ್ನು ಹೊಂದಿದ್ದೆವು ಮತ್ತು ಕನಿಷ್ಠ ಸಮಯದಲ್ಲಿ ಘರ್ಷಣೆಗಳನ್ನು ನಿಯಂತ್ರಿಸುವುದರಲ್ಲಿ ಯಶಸ್ವಿಯಾಗಿದ್ದೆವು ’ ಎಂದು ಪಾಠಕ್ ಹೇಳಿದ್ದರು.
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತಾಗಲು ಮತ್ತು ಪೊಲೀಸರು ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸುವಲ್ಲಿ ವಿಫಲರಾಗದಿರಲು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹೊಣೆಗಾರಿಕೆಯನ್ನು ನಿಗದಿಪಡಿಸುವ ಅಗತ್ಯವಿದೆ ಎಂದು ನ್ಯಾಯಾಧೀಶರು ಶನಿವಾರ ವಿಚಾರಣೆ ಸಂದರ್ಭದಲ್ಲಿ ಹೇಳಿದರು.







