19 ಲಕ್ಷ ಇವಿಎಂ ಕಣ್ಮರೆ, ಉನ್ನತ ಮಟ್ಟದ ತನಿಖೆ ಅಗತ್ಯ: ಎಚ್.ಕೆ.ಪಾಟೀಲ್
ಸ್ಪೀಕರ್ ಕಾಗೇರಿಗೆ ಪುರಾವೆ ಸಲ್ಲಿಸಿದ ಕಾಂಗ್ರೆಸ್

photo- twitter@HKPatil1953
ಬೆಂಗಳೂರು, ಮೇ 8: ದೇಶದೆಲ್ಲೆಡೆ ಬರೋಬ್ಬರಿ 19 ಲಕ್ಷ ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂ) ಕಣ್ಮರೆಯಾಗಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಒತ್ತಾಯಿಸಿದರು.
ರವಿವಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ 19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿರುವ ಬಗ್ಗೆ ಕಾಗದ ಪತ್ರಗಳನ್ನು ಸಲ್ಲಿಸಿದ ನಂತರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚಿಸಿದಂತೆ ಚುನಾವಣಾ ಸುಧಾರಣೆಗಳ ಹಾಗೂ ಕಾಣೆಯಾದ ಇವಿಎಂ ಯಂತ್ರಗಳ ಕುರಿತು ಕಾಗದ ಪತ್ರಗಳು ಹಾಗೂ ಪುರಾವೆಗಳನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಅವರಿಗೆ ಸಲ್ಲಿಸಲಾಗಿದ್ದು, ಇವಿಎಂ ಕಾಣೆಯಾಗಿರುವ ಬಗ್ಗೆ ತನಿಖೆ ನಡೆಸಲು ಕೋರಿ ಮನವಿ ಸಲ್ಲಿಸಿದ್ದೇವೆ ಎಂದರು.
ಇದಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 2750 ಪುಟಗಳ ದಾಖಲೆಗಳನ್ನು ಸಭಾಧ್ಯಕ್ಷರಿಗೆ ಸಲ್ಲಸಿ, ಸ್ವತಂತ್ರ ತನಿಖೆ ನಡೆಯಲು ಒತ್ತಾಯಿಸಲಾಗಿದೆ. ಪ್ರಮುಖವಾಗಿ ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಮನೋರಂಜನ್ ಸಂತೋಷ್ ರಾಯ್ ಅವರು ಸಾಕಷ್ಟು ಮಾಹಿತಿ ಸಂಗ್ರಹಿಸಿ, ಬೆಳಕು ಚೆಲ್ಲಿದ್ದಾರೆ ಎಂದ ಅವರು, ಇವಿಎಂ ಹ್ಯಾಕ್ ಮಾಡುವ ಬಗ್ಗೆ ಜನರಲ್ಲಿ ಅನುಮಾನವಿದೆ. ‘ಎಥಿಕಲ್ ಹ್ಯಾಕ್ಥಾನ್ʼ ಮೂಲಕ ಅನುಮಾನ ದೂರ ಮಾಡಬೇಕಿದ್ದು, ಸಭಾಧ್ಯಕ್ಷರು ಸರಕಾರಕ್ಕೆ ಮತ್ತು ರಾಜ್ಯ ಚುನಾವಣೆ ಆಯೋಗಕ್ಕೆ ವಿಧಾನಸೌಧದಲ್ಲಿ ಎಥಿಕಲ್ ಹ್ಯಾಕ್ಥಾನ್ ನಡೆಸುವಂತೆ ಸೂಚಿಸಬೇಕು ಅವರು ಮನವಿ ಮಾಡಿದರು.
ಚುನಾವಣೆ ಸುಧಾರಣೆಗಳ ಚರ್ಚೆಯಲ್ಲಿ ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ. ನ್ಯಾಯಾಲಯಗಳಲ್ಲಿ ಚುನಾವಣೆ ಅರ್ಜಿಗಳ ವಿಚಾರಣೆ ಅವಮಾನಕಾರಿ ರೀತಿಯಲ್ಲಿ ವಿಳಂಬವಾಗುತ್ತದೆ. ಹೊಸ ಚುನಾವಣೆ ಪ್ರಕಟವಾಗುತ್ತಿದ್ದಂತೆ ಪ್ರಕರಣಗಳನ್ನು ಖುಲಾಸೆ ಮಾಡಲಾಗುತ್ತದೆ. ನಮ್ಮ ಸದನದ ಒಟ್ಟು ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಗಮನಕ್ಕೆ ಸಭಾಧ್ಯಕ್ಷರು ತರಬೇಕೆಂದು ಅವರು ಉಲ್ಲೇಖಿಸಿದರು.
ಅಲ್ಲದೆ, ಕೇಂದ್ರ ಚುನಾವಣೆ ಆಯೋಗ ಕೂಡ ಇವಿಎಂ ಕಾಣೆ ಬಗ್ಗೆ ತನಿಖೆ ನಡೆಸೇಕು. ಚುನಾವಣೆ ಅಕ್ರಮ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಕೇಂದ್ರ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. 19 ಲಕ್ಷ ಇವಿಎಂ ಎಲ್ಲಿ ಹೋದವು ಎಂಬ ಸತ್ಯ ದೇಶದ ಜನತೆಗೆ ತಿಳಿಯಬೇಕು ಎಂದು ಎಚ್.ಕೆ.ಪಾಟೀಲ್ ನುಡಿದರು.
‘ಕಟೀಲ್ಗೆ ನೈತಿಕತೆ ಇಲ್ಲ’
ಪಿಎಸ್ಸೈ ನೇಮಕಾತಿ ಹಗರಣ, 40ರಷ್ಟು ಕಮಿಷನ್ ಪ್ರಕರಣ ಸೇರಿದಂತೆ ಇನ್ನಿತರೆ ಪ್ರಕರಣಗಳ ಆರೋಪ ರಾಜ್ಯ ಸರಕಾರದ ಮೇಲಿದ್ದರೂ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಯಾವ ನೈತಿಕತೆ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಾರೆ ಎಂದು ಎಚ್.ಕೆ.ಪಾಟೀಲ್ ಪ್ರಶ್ನಿಸಿದರು.
ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚಿಸಿದಂತೆ ಚುನಾವಣಾ ಸುಧಾರಣೆಗಳ ಹಾಗೂ ಕಾಣೆಯಾದ EVM ಯಂತ್ರಗಳ ಕುರಿತು ಕಾಗದ ಪತ್ರಗಳು ಹಾಗೂ ಪುರಾವೆಗಳನ್ನು ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಬೆಂಗಳೂರಿನಲ್ಲಿ ಇಂದು ಸಲ್ಲಿಸಿದೆ . pic.twitter.com/LuyuXpht2g
— HK Patil (@HKPatil1953) May 8, 2022







