ಕಡಬ ಚರ್ಚ್ ದಾಂಧಲೆ ಪ್ರಕರಣ: ಸಂತ್ರಸ್ತರು ಮತ್ತು ಹೋರಾಟಗಾರರ ವಿರುದ್ಧ ಮೊಕದ್ದಮೆಗೆ ಎಸ್‌ಡಿಪಿಐ ಖಂಡನೆ
ಮಂಗಳೂರು ಮೇ 8: ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ಪೇರಡ್ಕದಲ್ಲಿ ಇಮ್ಯಾನ್ಯುಯೆಲ್ ಚರ್ಚಿನಲ್ಲಿ ದುಷ್ಕರ್ಮಿಗಳು ದಾಂಧಲೆ ನಡೆಸಿ ಅಲ್ಲಿನ ಹೋಲಿ ಕ್ರಾಸನ್ನು ದ್ವಂಸ ಮಾಡಿ ಕೇಸರಿ ದ್ವಜವನ್ನು ಕಟ್ಟಿದ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವ ಬದಲು ಆತಂಕಕ್ಕೊಳಗಾಗಿದ್ದ ಚರ್ಚಿನ ಧರ್ಮಗುರುಗಳು ಮತ್ತು ಚರ್ಚಿನ ಅನುಯಾಯಿಗಳು ಹಾಗೂ ಹೋರಾಟಗಾರರ ವಿರುದ್ಧವೇ ಪ್ರಕರಣ ದಾಖಲಿಸಿರುವ ಕೃತ್ಯ ಖಂಡನೀಯ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ.
ಎಸ್‌ಡಿಪಿಐ ದ.ಕ. ಜಿಲ್ಲಾ ಉಪಾದ್ಯಕ್ಷ ವಿಕ್ಟರ್ ಮಾರ್ಟೀಸ್ ನೇತೃತ್ವದ ನಿಯೋಗವು ಚರ್ಚಿನ ಧರ್ಮಗುರುಗಳು ಹಾಗೂ ಅಲ್ಲಿನ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರಿಗೆ ದೈರ್ಯತುಂಬಿ ಕಡಬ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದರು. ಮೊದಲು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದ ಪೊಲೀಸರು ಬಳಿಕ ದೂರು ಸ್ವೀಕರಿಸಿದರು. ಅದರಂತೆ ತನಿಖೆ ನಡೆಸಿ ಅರೋಪಿಗಳನ್ನು ಪತ್ತೆ ಹಚ್ಚಬೇಕಾದ ಪೊಲೀಸರು ಸಂಘ ಪರಿವಾರದ ಕಾರ್ಯಕರ್ತನೊಬ್ಬ ಚರ್ಚಿನ ಧರ್ಮಗುರುಗಳ ಮತ್ತು ಎಸ್‌ಡಿಪಿಐ ಮುಖಂಡರ ಮೇಲೆ ಕೊಟ್ಟ ದೂರಿನಂತೆ ಪೊಲೀಸರು ಎಫ್‌ಐಆರ್ ದಾಖಲಿಸುವ ಮೂಲಕ ಸಂತ್ರಸ್ತರು ಮತ್ತು ಹೊರಾಟಗಾರರ ಮೇಲೆ ಅನ್ಯಾಯ ಎಸಗಿದ್ದಾರೆ, ಪೊಲೀಸರಿಗೆ ನೈಜ ಘಟನೆ ಬಗ್ಗೆ ಗೊತ್ತಿದ್ದರೂ ಯಾರ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಂಡಿದ್ದಾರೆ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.
ಹಾಗಾಗಿ ಪೊಲೀಸ್ ಇಲಾಖೆಯು ಸಂತ್ರಸ್ತರ ಮತ್ತು ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು. ಚರ್ಚ್ ದಾಳಿಯ ಆರೋಪಿಗಳನ್ನ ಕೂಡಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಜನಾಂದೊಲನದ ಜತೆಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಎಚ್ಚರಿಸಿದ್ದಾರೆ.





