ಚಿತ್ರ ನಿರ್ದೇಶಕ ಸ್ಟ್ಯಾನ್ಲಿ ಜೋಸೆಫ್ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು, ಮೇ 8: ಚಲನಚಿತ್ರ ನಿರ್ದೇಶಕ ಸ್ಟ್ಯಾನ್ಲಿ ಜೋಸೆಫ್ ವಿರುದ್ಧದ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮತ್ತು ಸಾಲ ಮರುಪಾವತಿಸಿಲ್ಲ ಎಂಬ ಆರೋಪ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಜೊತೆಗೆ ಈ ಪ್ರಕರಣದಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ ನಂತರ ನಿರಾಕರಿಸಿರುವುದು ಐಪಿಸಿ ಯಡಿ ವಂಚನೆಯಾಗುವುದಿಲ್ಲ ಎಂದು ಹೇಳಿದೆ. ಆದರೆ ಆಕೆಯಿಂದ ಪಡೆದಿರುವ ಹಣ ಮರು ಪಾವತಿ ಮಾಡದಿದ್ದರೆ ಅದು ಭಾರತೀಯ ದಂಡ ಸಂಹಿತೆ ಸೆಕ್ಷನ್ 420 ರಡಿ ವಂಚನೆಯಾಗುತ್ತದೆ ಎಂದು ಕೋರ್ಟ್ ಆದೇಶಿಸಿದೆ.
ಹೀಗಾಗಿ, ಚಿತ್ರ ನಿರ್ದೇಶಕ ಸ್ಟ್ಯಾನ್ಲ್ಲಿ ಜೋಸೆಫ್ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮ ವಿರುದ್ಧದ ಎಫ್‍ಐಆರ್ ರದ್ದು ಕೋರಿ ಸ್ಟ್ಯಾನ್ಲ್ಲಿ ಜೋಸೆಫ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಕೋರ್ಟ್ ಆದೇಶವೇನು: ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, "ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಸಹ ಎರಡನೇ ಮಾಹಿತಿ ಆಧರಿಸಿ ಪೆÇಲೀಸರು ಪ್ರಥಮ ವರ್ತಮಾನ ದಾಖಲಿಸಿದ್ದಾರೆಂಬುದಕ್ಕೆ ಅಧೀನ ನ್ಯಾಯಾಲಯದಲ್ಲಿ ಯಾವುದೇ ದಾಖಲೆ ತೋರಿಸಿಲ್ಲ" ಎಂದೂ ಹೇಳಿದೆ.
‘ಅರ್ಜಿದಾರರ ವಿರುದ್ಧ ಪ್ರತಿವಾದಿ ಶಾಜಿಯಾ ಅಸ್ರಾ ಹೂಡಿರುವ ದೂರಿನಲ್ಲಿ ಹಿಂದೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಎಂಎಲ್ ಸಿ (ವೈದ್ಯಕೀಯ ಲೀಗಲ್ ಕೇಸ್) ದಾಖಲಾಗಿತ್ತು ಎಂದು ಹೇಳಿದ ಮಾತ್ರಕ್ಕೆ ಮೊದಲೇ ತನ್ನ ವಿರುದ್ಧ ಕೇಸು ದಾಖಲಾಗಿತ್ತು ಎಂದು ಹೇಳಲಾಗದು. ಎಂಎಲ್‍ಸಿ ಕೇಸು ದಾಖಲಾದ ಮಾತ್ರಕ್ಕೆ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಕೇಸು ರದ್ದುಗೊಳಿಸಬೇಕೆಂದು ಕೋರುವುದಕ್ಕೆ ಆಧಾರವಾಗುವುದಿಲ್ಲ' ಎಂದು ನ್ಯಾಯಾಲಯ ಆದೇಶಿಸಿದೆ.
‘ಮದುವೆಯಾಗುವುದಾಗಿ ನಂಬಿಸಿ ವಂಚಿಸಿದರೆ ಅದು ಐಪಿಸಿಯಡಿ ವಂಚನೆ ಆಗುವುದಿಲ್ಲ. ಆದರೆ ಸಾಲವನ್ನು ಪಡೆದು ಅದನ್ನು ಮತ್ತೆ ಮರುಪಾವತಿ ಮಾಡದಿದ್ದರೆ ಐಪಿಸಿ ಸೆಕ್ಷನ್ 150ರ ಪ್ರಕಾರ ಅಪರಾಧದ ಉದ್ದೇಶದ ವಂಚನೆಯಾಗಲಿದೆ. ಆದುದರಿಂದ ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು, ತನಿಖೆಯನ್ನು ಎದುರಿಸಲೇಬೇಕು' ಎಂದು ನ್ಯಾಯಪೀಠ ಆದೇಶಿಸಿದೆ.
ಅಲ್ಲದೆ, ಕೋರ್ಟ್ ಕೇಸಿನ ಸಮಗ್ರ ವಿವರಗಳ ಬಗ್ಗೆ ತನಿಖೆ ನಡೆಸಲಾಗದು, ತನಿಖೆ ಮಾಡುವುದು ತನಿಖಾಧಿಕಾರಿಯ ಕೆಲಸವಾಗಿದೆ, ಅದನ್ನು ಅವರು ಮಾಡಬೇಕಿದೆ. ಹಾಗಾಗಿ ಅರ್ಜಿದಾರರ ವಿರುದ್ಧದ ಎಫ್‍ಐಆರ್ ಈ ಹಂತದಲ್ಲಿಯೇ ರದ್ದುಗೊಳಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.







