ಖ್ಯಾತ ಸ್ಟ್ರಕ್ಚರಲ್ ಇಂಜಿನಿಯರ್ ಮಹೇಂದ್ರ ರಾಜ್ ನಿಧನ
ಸಾಲಾರ್ ಜಂಗ್ ಮ್ಯೂಸಿಯಂ, ಪ್ರಗತಿ ಮೈದಾನ್ ಗಳ ವಿನ್ಯಾಸಕಾರ

ಮಹೇಂದ್ರ ರಾಜ್ (Photo: Twitter/@ranjithoskote)
ಹೊಸದಿಲ್ಲಿ: ಇಲ್ಲಿನ ಪ್ರಗತಿ ಮೈದಾನದಲ್ಲಿರುವ ಹಾಲ್ ಆಫ್ ನೇಷನ್ಸ್, ಸಲಾರ್ಜಂಗ್ ಮ್ಯೂಸಿಯಂ ಹೈದರಾಬಾದ್, ಮುನ್ಸಿಪಲ್ ಸ್ಟೇಡಿಯಂ ಮತ್ತು ಸ್ಫೋರ್ಟ್ ಕ್ಲಾಂಪೆಕ್ಸ್ ಅಹ್ಮದಾಬಾದ್ ಸೇರಿದಂತೆ ಹಲವು ಪ್ರತಿಸ್ಠಿತ ಯೋಜನೆಗಳ ವಿನ್ಯಾಸದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸ್ಟ್ರಕ್ಚರಲ್ ಇಂಜಿನಿಯರ್ ಮಹೇಂದ್ರ ರಾಜ್ ರವಿವಾರ ಬೆಳಗ್ಗೆ ತಮ್ಮ ದಿಲ್ಲಿಯ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಗೋಡೆಗಳನ್ನು ತರಹೇವಾರಿಯಾಗಿ ಬಗ್ಗಿಸುವ ನಿಪುಣತೆಯನ್ನು ಮತ್ತು ನಾವೀನ್ಯತೆಯನ್ನು ಅಭಿವೃದ್ಧಿಪಡಿಸಲು ದೇಶದ ಪ್ರಮುಖ ವಾಸ್ತುಶಿಲ್ಪಿಗಳೊಂದಿಗೆ ಅವರು ಕೆಲಸ ಮಾಡಿದ್ದರು. ಚೆನ್ನೈನಲ್ಲಿನ ಹೂವಿನ ಮಾರುಕಟ್ಟೆಯ ಛಾವಣಿಯ ಮೇಲೆ ರಚಿಸಿದ ಹೂವಿನ ಥರದ ಉಬ್ಬು, ಹಾಲ್ ಆಫ್ ನೇಷನ್ಸ್ ನಲ್ಲಿನ ವಾಸ್ತುಶಿಲ್ಪ, ಅಹ್ಮದಾಬಾದ್ ಸ್ಟೇಡಿಯಂನಲ್ಲಿ ಕಾಗದದ ಕ್ಲಿಪ್ ಥರದ ಇಳಿಜಾರಾದ ಮಡಿಸಿದ ಕಾಲುಗಳು ಮುಂತಾದವುಗಳು ಮಹೇಂದ್ರ ರಾಜ್ ರ ಅವಿಷ್ಕಾರಗಳಿಗೆ ಪ್ರಮುಖ ಉದಾಹರಣೆಗಳಾಗಿವೆ. ಆರು ದಶಕಗಳ ಕಾಲದ ಅವರ ವೃತ್ತಿ ಜೀವನದಲ್ಲಿ ಭಾರತದಾದ್ಯಂತ 180ಕ್ಕೂ ಹೆಚ್ಚು ಪ್ರಮುಖ ಯೋಜನೆಗಳಲ್ಲಿ ತಮ್ಮ ಇಂಜಿನಿಯರಿಂಗ್ ಕುಶಲತೆಯನ್ನು ಹೊರಗೆಡಹಿದರು.
"ಅವರು ನನ್ನ ಜೀವನದುದ್ದಕ್ಕೂ ಮಾರ್ಗದರ್ಶಕರಾಗಿದ್ದರು. ನನ್ನ ವೃತ್ತಿಜೀವನದ ಅತ್ಯುತ್ತಮ ಕಟ್ಟಡಗಳ ನಿರ್ಮಾಣದಲ್ಲಿ ನಾನು ರಾಜ್ ರೆ ಋಣಿಯಾಗಿದ್ದೇನೆ. ಈಗಿನ ದಿನಗಳಲ್ಲಿ ತಮ್ಮ ಉದ್ಯೋಗದ ಜೊತೆಗೆ ಕುಶಲತೆಯ ಕುರಿತು ಹೆಚ್ಚೇನೂ ಮಾತನಾಡುವಂತಿಲ್ಲ. ಆದರೆ ಜೀವನದ ಗುಣಮಟ್ಟ ಮತ್ತು ಅನುಗ್ರಹವು ಸೃಜನಶೀಲ ಮನಸ್ಸಿದ್ದಾಗ ಮಾತ್ರ ಬರುತ್ತದೆ. ಅವರು ಎಲ್ಲಾ ಆರ್ಕಿಟೆಕ್ಟ್ ಗಳಿಗೆ ಓರ್ವ ತೋಟಗಾರನಂತಿದ್ದರು. ಸುಂದರವಾದ ವಸ್ತುಗಳನ್ನು ರಚಿಸಿದರು. ಅವರು ಸಮಸ್ಯೆಯನ್ನು ನೋಡದೇ ಪರಿಹಾರ ಕಂಡುಕೊಂಡರು. ನಾವು ಓರ್ವ ಹಿರಿಯ ಸಹೋದರನನ್ನು ಕಳೆದುಕೊಂಡಿದ್ದೇವೆ" ಎಂದು ಎಂದು ಪ್ರಿಟ್ಜ್ಕರ್ ಪ್ರಶಸ್ತಿ ವಿಜೇತ ವಾಸ್ತುಶಿಲ್ಪಿ ಬಿ ವಿ ದೋಷಿ ಹೇಳುತ್ತಾರೆ. ಅವರು ರಾಜ್ ಅವರೊಂದಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು ಮತ್ತು ಟಾಗೋರ್ ಹಾಲ್, ಅಹಮದಾಬಾದ್ ಸೇರಿದಂತೆ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.
ಸಯ್ಯದ್ ಬ್ಯಾರಿ ಸಂತಾಪ
ಮಹೇಂದ್ರ ರಾಜ್ ಅವರ ನಿಧನಕ್ಕೆ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಹೇಂದ್ರ ರಾಜ್ ಸರ್ ಅವರಂತಹ ಮೇಧವಿಯೊಬ್ಬರು ಬ್ಯಾರೀಸ್ ಗ್ರೂಪ್ ನ ಹಲವು ಪ್ರಮುಖ ಯೋಜನೆಗಳನ್ನು ವಿನ್ಯಾಸ ಮಾಡಿರುವುದು ನಮ್ಮ ಪಾಲಿಗೆ ಅತ್ಯಂತ ಹೆಮ್ಮೆಯ ವಿಷಯ. ಅವರು ವಿನ್ಯಾಸ ಮಾಡಿರುವ ಪ್ರತಿಯೊಂದು ಬ್ಯಾರೀಸ್ ಯೋಜನೆ ಭಾರೀ ಜನಮನ್ನಣೆ ಗೆ ಪಾತ್ರವಾಗಿದೆ ಹಾಗೂ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. ಅವರಂತಹ ಶ್ರೇಷ್ಠ ಸ್ಟ್ರಕ್ಚರಲ್ ಇಂಜಿನಿಯರ್ ಅಪರೂಪದಲ್ಲಿ ಅಪರೂಪ. ಮುಂದಿನ ಹಲವು ಪೀಳಿಗೆಗಳಿಗೆ ಅವರು ಮಾದರಿ ಯಾಗಿದ್ದಾರೆ ಎಂದು ಸಯ್ಯದ್ ಬ್ಯಾರಿ ಹೇಳಿದ್ದಾರೆ.







