ಪ್ರಣಯ್ ಪಾಟೀಲ್ ರ ಕೃತಿ ಮಾನವ ಸಂಬಂಧಗಳ ಆವಿಷ್ಕಾರ: ರಾಜದೀಪ್ ಸರ್ ದೇಸಾಯಿ

ಬೆಂಗಳೂರು, ಮೇ 8: ‘ವೈಯಕ್ತಿಕ ಪ್ರಯಾಣದಲ್ಲಿನ ತಮ್ಮ ಅನುಭವಗಳನ್ನು ಉತ್ತಮ ರೀತಿಯಲ್ಲಿ ಪುಸ್ತಕವು ಹೇಗೆ ಜೀವಂತವಾಗಿಸುತ್ತದೆ ಎಂಬುದನ್ನು 'ಬರ್ಗಂಡಿ ವಿಂಟರ್ಸ್ ಇನ್ ಯುರೋಪ್' ಕೃತಿಯ ಮೂಲಕ ಪ್ರಣಯ್ ಪಾಟೀಲ್ ಅವರ ಮಾನವ ಸಂಬಂಧಗಳ ಆವಿಷ್ಕಾರವು ಹೊರಗೆಡವುತ್ತದೆ' ಎಂದು ಪತ್ರಕರ್ತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜದೀಪ್ ಸರ್‍ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದಲ್ಲಿ ಸಾಮಾಜಿಕ ಕಾರ್ಯಕರ್ತ, ಲೇಖಕ ಪ್ರಣಯ್ ಪಾಟೀಲ್ ಅವರ ಪ್ರಥಮ ಕೃತಿ ‘ಬರ್ಗಂಡಿ ವಿಂಟರ್ಸ್ ಇನ್ ಯುರೋಪ್’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಯುವ ಲೇಖಕ ಪ್ರಣಯ್ ಪಾಟೀಲರ ಕೃತಿಯು ರಾಕ್‍ಸ್ಟಾರ್ ಒಬ್ಬರ ಜೀವನಗಾಥೆ ಹೇಳುತ್ತದೆ. ನೈಜ ನಿರೂಪಣೆಯಿಂದಾಗಿ ಓದುಗರನ್ನು ಆವರಿಸಿಕೊಳ್ಳುವ ಪುಸ್ತಕ ಇದಾಗಿದೆ ಎಂದು ಬಣ್ಣಿಸಿದರು.
ಕಾದಂಬರಿಯ ನಾಯಕ ಜೇಸ್ ಟನ್ನರ್‍ನ ಮಾದಕ ವಸ್ತು ಸೇವನೆ ಆತನ ಜೀವ ಹಿಂಡುವ ಪರಿ, ನಾಯಕಿ ಯಾಸ್ಮಿನ್‍ಳ ಪ್ರವೇಶದಿಂದ ಆತನ ಬದುಕಿನಲ್ಲಾಗುವ ಬದಲಾವಣೆಯನ್ನು ಓದುಗರ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಪ್ರೀತಿ ಪ್ರಣಯ, ಭೂತದ ಕತೆಗಳು, ವಾಮಾಚಾರ, ಪುನರ್ಜನ್ಮವೂ ಕೃತಿಯಲ್ಲಿ ಕಾಣಿಸುತ್ತದೆ ಎಂದು ಅವರು ತಿಳಿಸಿದರು.
ಅಂಕಣಗಾರ್ತಿ ಪೂಜಾ ಬೇಡಿ, ‘ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. ಮನುಷ್ಯನ ಜೀವ ಬಹಳ ಅಮೂಲ್ಯವಾದುದು. ಅದನ್ನು ಜತನದಿಂದ ಕಾಪಾಡಿಕೊಳ್ಳುವುದು ಮುಖ್ಯ. ಜೀವನದಲ್ಲಿ ಏಳು ಬೀಳು ಸಾಮಾನ್ಯ. ಅವುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನೂ ಕೃತಿ ಒತ್ತಿ ಹೇಳುತ್ತದೆ’ ಎಂದು ಹೇಳಿದರು.
ಲೇಖಕ ಪ್ರಣಯ್ ಪಾಟೀಲ್ ಮಾತನಾಡಿ, ‘ನನಗೆ ಅಸಹಾಯಕತೆಯ ಅನುಭವ ಕಾಡುತ್ತಿದ್ದರಿಂದ ಲಾಕ್‍ಡೌನ್ ಸಮಯದಲ್ಲಿ ಪುಸ್ತಕ ಬರೆಯಲು ಪ್ರಾರಂಭಿಸಿದೆ. ಕೋವಿಡ್‍ಗೆ ಬಲಿಯಾಗದ ಅನೇಕರು ದಿನಕ್ಕೆ ಊಟ ಸಂಪಾದಿಸಲು ಹೆಣಗಾಡುತ್ತಿದ್ದರು. ನಾನು ಆಹಾರ, ಔಷಧಗಳನ್ನು ಕೊಡುಗೆ ನೀಡುವ ಮೂಲಕ ಸಹಾಯ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಕಾಗುವುದಿಲ್ಲ ಎಂದು ನಾನು ಭಾವಿಸಿದೆ. ಅದನ್ನು ಕೃತಿಯಲ್ಲಿ ಬರೆದಿದ್ದೇನೆ' ಎಂದು ವಿವರಿಸಿದರು.







