ಬಿಜೆಪಿ ಸರಕಾರವನ್ನು ಬೇರು ಸಮೇತ ಕಿತ್ತು ಹಾಕಿ: ಸಿದ್ದರಾಮಯ್ಯ

ಬೆಳಗಾವಿ, ಮೇ 8: ‘ನಾನು ಬಸವಣ್ಣನ ಜಯಂತಿ ದಿನ ಪ್ರಮಾಣ ವಚನ ಸ್ವೀಕರಿಸಿ ಜನರಿಗೆ ನೀಡಿದ್ದ ಎಲ್ಲ ಆಶ್ವಾಸನೆ ಈಡೇರಿಸಿದ್ದೇನೆ. 2023ಕ್ಕೆ ಮತ್ತೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ತಲಾ 10ಕೆ.ಜಿ. ಅಕ್ಕಿ ಕೊಡುತ್ತೇವೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರವಿವಾರ ಜಿಲ್ಲೆಯ ರಾಮದುರ್ಗದಲ್ಲಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ‘ಬಹಳ ಸಂತೋಷದಿಂದ ರಾಯಣ್ಣ ಪುತ್ಥಳಿ ಅನಾವರಣ ಮಾಡಿದ್ದೇನೆ. ರಾಯಣ್ಣ ಅವರಿಗೆ ದೇಶಪ್ರೇಮ ನಾಡಿನ ಪ್ರೇಮ ಇತ್ತು. ಹೀಗಾಗಿ, ಅವರು ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ನಾವೆಲ್ಲರೂ ದೇಶಭಕ್ತಿ ಬೆಳೆಸಿಕೊಳ್ಳಬೇಕು' ಎಂದು ಕರೆ ನೀಡಿದರು.
ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ 300 ಕೋಟಿ ರೂ.ಲೂಟಿಯಾಗಿದ್ದು, ಇಂತಹ ಬಿಜೆಪಿ ಸರಕಾರ ಇನ್ನೂ ರಾಜ್ಯದಲ್ಲಿ ಇರಬೇಕಾ? ಯಾವುದೇ ಕಾರಣಕ್ಕೂ ಇಂತಹವರು ಅಧಿಕಾರದಲ್ಲಿ ಇರಬಾರದು. ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ಇದನ್ನು ಬೇರು ಸಹಿತ ಕಿತ್ತು ಹಾಕಬೇಕು. ಹೀಗಾಗಿ, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಒಳ್ಳೆಯ ನಿರ್ಧಾರ ಮಾಡಿ' ಎಂದು ಸಿದ್ದರಾಮಯ್ಯ ಮನವಿ ಮಾಡಿದರು.





