ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ದಂಡು
ಪ್ರಕ್ಷುಬ್ಧಗೊಂಡ ಸಮುದ್ರ: ಮೂವರ ರಕ್ಷಣೆ, ಜಲಕ್ರೀಡೆ ಸ್ಥಗಿತ

ಉಡುಪಿ, ಮೇ 8: ವಾರಾಂತ್ಯ ರಜೆಯ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ನಲ್ಲಿ ಇಂದು ಜನ ಸಾಗರವೇ ಸೇರಿದ್ದು, ಸಮುದ್ರದಲ್ಲಿ ಆಡುತ್ತಿದ್ದಾಗ ನೀರು ಪಾಲಾಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ತಂಡವು ರಕ್ಷಿಸಿರುವ ಬಗ್ಗೆ ವರದಿಯಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉಡುಪಿಯತ್ತ ಬರುತ್ತಿರುವುದರಿಂದ ಮಲ್ಪೆ ಬೀಚ್‌ನಲ್ಲಿ ಜನಸ್ತೋಮವೇ ನೆರೆದಿತ್ತು. ಬೀಚಿನ ಪ್ರಮುಖ ಆಕರ್ಷಣೀಯಾಗಿರುವ ತೇಲುವ ಸೇತುವೆಯಲ್ಲಿ ನಡೆಯುವುದಕ್ಕೂ ಸಾಕಷ್ಟು ಮಂದಿ ಸ್ಥಳೀಯರು ಆಗಮಿಸಿದ್ದರು.
ಚಂಡಮಾರುತದ ಪರಿಣಾಮ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವುದು ಕಂಡುಬಂದವು. ಈ ವೇಳೆ ಸಮುದ್ರದಲ್ಲಿ ಆಡುತ್ತಿದ್ದ ಹೊರ ಜಿಲ್ಲೆಯ ಮೂವರು ಪ್ರವಾಸಿಗರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, ಕೂಡಲೇ ಕಾರ್ಯಪ್ರವೃತರಾದ ಲೈಫ್ ಗಾರ್ಡ್ ತಂಡದವರು ಸಮುದ್ರಕ್ಕೆ ಧುಮುಕಿ ಮೂವರನ್ನು ರಕ್ಷಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ಸಂಜೆ 4ಗಂಟೆ ಸುಮಾರಿಗೆ ಬೀಚ್‌ನಲ್ಲಿನ ವಾಟರ್ ಸ್ಪೋರ್ಟ್ಸ್ ಹಾಗೂ ತೇಲುವ ಸೇತುವೆ ಪ್ರವೇಶವನ್ನು ಸ್ಥಗಿತಗೊಳಿಸಲಾಯಿತು ಎಂದು ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.