ಸಮುದಾಯ ಮಟ್ಟಕ್ಕೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ: ಶಾಂಘೈಯಲ್ಲಿ ಇನ್ನಷ್ಟು ಕಠಿಣ ಕೋವಿಡ್ ನಿರ್ಬಂಧ ಜಾರಿ

photo:twitter
ಬೀಜಿಂಗ್, ಮೇ 8: ಮೇ ತಿಂಗಳಾಂತ್ಯದೊಳಗೆ ಶೂನ್ಯ ಕೋವಿಡ್ ಪ್ರಕರಣದ ಗುರಿ ಇರಿಸಿಕೊಂಡಿರುವ ಚೀನಾದ ವಾಣಿಜ್ಯ ರಾಜಧಾನಿ ಶಾಂಘೈಯಲ್ಲಿ ಈಗಾಗಲೇ ಜಾರಿಯಲ್ಲಿರುವ ಕೋವಿಡ್ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದು, ಸರಕಾರದ ಸೂಚನೆಯನ್ನು ಪ್ರಶ್ನಿಸದೆ ಪಾಲಿಸಬೇಕೆಂದು ಕಟ್ಟುನಿಟ್ಟಿನ ಸಂದೇಶವನ್ನು ಆಡಳಿತ ರವಾನಿಸಿದೆ ಎಂದು ವರದಿಯಾಗಿದೆ.
ಕ್ವಾರಂಟೈನ್ ವ್ಯವಸ್ಥೆಯ ಹೊರಭಾಗದಲ್ಲಿ ಸೋಂಕಿನ ಪ್ರಕರಣ ಹೆಚ್ಚುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ. ಶಾಂಘೈ ಪ್ರಾಂತದ 16 ಜಿಲ್ಲೆಗಳಲ್ಲಿ ಕೆಲವು ಈಗಾಗಲೇ ಗುರಿ ಮುಟ್ಟಿರುವುದರಿಂದ ನಿರ್ಬಂಧಗಳಲ್ಲಿ ವ್ಯತ್ಯಾಸವಿದೆ. ಆದರೆ ಜನರ ಸಂಚಾರಕ್ಕೆ ಸಂಬಂಧಿಸಿದ ನಿರ್ಬಂಧ ಬಹುತೇಕ ಸಮಾನವಾಗಿದೆ. ಕೊರೋನ ಸೋಂಕು ಪ್ರಕರಣ ಕಡಿಮೆಯಾಗುತ್ತಿದ್ದರೂ, ಮರುಕಳಿಸುವ ಭೀತಿ ಇರುವುದರಿಂದ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. 25 ಮಿಲಿಯನ್ ಜನಸಂಖ್ಯೆಯ ಶಾಂಘೈ ನಗರದಲ್ಲಿ ಪೊಸಿಟಿವ್ ವರದಿ ಬಂದ ವ್ಯಕ್ತಿಗಳ ಜತೆ ಸಂಪರ್ಕದಲ್ಲಿರುವವರನ್ನು ಪತ್ತೆಹಚ್ಚಿ ಕೇಂದ್ರ ಕ್ವಾರಂಟೈನ್ ವ್ಯವಸ್ಥೆಗೆ ವರ್ಗಾಯಿಸಲಾಗುತ್ತಿದೆ. ಈ ಮಧ್ಯೆ, ವಸತಿ ಸಂಕೀರ್ಣದಲ್ಲಿ ಕೊರೋನ ಸೋಂಕು ಪ್ರಕರಣ ಪತ್ತೆಯಾದರೆ, ಕಟ್ಟಡದ ಎಲ್ಲಾ ನಿವಾಸಿಗಳನ್ನೂ (ನೆಗೆಟಿವ್ ವರದಿ ಬಂದವರೂ) ಕ್ವಾರಂಟೈನ್ಗೆ ರವಾನಿಸುತ್ತಿದ್ದು ಈ ಬಗ್ಗೆ ಜನತೆ ಆಕ್ರೋಶ ಮತ್ತು ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.
ಸಮುದಾಯ ಮಟ್ಟದಲ್ಲಿ ಶೂನ್ಯ ಪ್ರಕರಣದ ಗುರಿ ಇರಿಸಿಕೊಂಡಿರುವ ಅಧಿಕಾರಿಗಳು, ಮನೆಯ ಬಾಗಿಲಿಂದ ಹೊರಗೆ ಕಾಲಿರಿಸಲೂ ಬಿಡುತ್ತಿಲ್ಲ. ಒಂದು ವಾರದಿಂದ ಮನೆಗೆ ಹೊರಗಿಂದ ಯಾವುದೇ ವಸ್ತು ಪೂರೈಕೆಯಾಗುವುದನ್ನೂ ತಡೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಆಕ್ರೋಶ ಹೊರಹಾಕಿದ್ದಾರೆ. ಶಾಂಘೈ ನಗರದಲ್ಲಿ ಹಲವು ಪ್ರದೇಶಗಳನ್ನು ಸೀಲ್ ಮಾಡಲಾಗಿದ್ದರೂ ದಿನಾ ಸಾವಿರಾರು ಸೋಂಕು ಪ್ರಕರಣ ವರದಿಯಾಗುತ್ತಿದೆ. ಅತ್ಯಧಿಕ ಸಾಂಕ್ರಾಮಿಕವಾದ ಒಮೈಕ್ರಾನ್ ಪ್ರಬೇಧದ ಪ್ರಕರಣ ಸಮುದಾಯಕ್ಕೆ ಹರಡುವ ಆತಂಕವಿದ್ದು ಜನತೆ ಮನೆಯ ಮುಂಬಾಗಿಲನ್ನು ತೆರೆಯಲೇ ಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಪ್ರಿಲ್ 20ರೊಳಗೆ ಸಂಪೂರ್ಣ ಶಾಂಘೈ ಪ್ರಾಂತದಲ್ಲಿ ಶೂನ್ಯ ಕೋವಿಡ್ ಸಾಧಿಸುವ ಗುರಿಯನ್ನು ಹೊಂದಿದ್ದರೂ ಇದುವರೆಗೆ ಕೇವಲ 2 ನಗರಗಳಲ್ಲಿ ಮಾತ್ರ ಗುರಿ ಸಾಧಿಸಲಾಗಿದೆ.
ಶನಿವಾರ ಪುಟುವೊ ಮತ್ತು ಚಾಂಗ್ನಿಂಗ್ ಜಿಲ್ಲೆಯ ವಸತಿಗಳನ್ನು ವಿವಿಧ ಗುಂಪುಗಳಲ್ಲಿ ವರ್ಗೀಕರಿಸಲಾಗಿದ್ದು, ಅಪಾಯ ಹೆಚ್ಚಿರುವ ಪ್ರದೇಶಗಳ ಜನತೆ ತಮ್ಮ ಮನೆಯ ಕಂಪೌಂಡ್ ದಾಟಿ ಹೊರಬರುವಂತಿಲ್ಲ ಎಂದು ಶನಿವಾರ ಸೂಚನೆ ನೀಡಲಾಗಿದೆ. ಕನಿಷ್ಟ 1 ವಾರ ಮನೆಯ ಮುಂಬಾಗಿಲನ್ನು ತೆರೆಯಬಾರದು ಮತ್ತು ಹೊರಗಿನಿಂದ ವಸ್ತುಗಳನ್ನು ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ ಎಂದು ಕ್ಸುಹುಯಿ ಜಿಲ್ಲೆಯ 9 ವಸತಿ ಕಟ್ಟಡಗಳ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಸಮುದಾಯ ಮಟ್ಟದಲ್ಲಿ ಶೂನ್ಯ ಪ್ರಕರಣದ ಗುರಿ ತಲುಪಲು ಮತ್ತು ಲಾಕ್ಡೌನ್ ಅನ್ನು ಶೀಘ್ರ ತೆರವುಗೊಳಿಸಲು ಇಂತಹ ಕ್ರಮ ಅನಿವಾರ್ಯ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.







