ಉಕ್ರೇನ್ ನಲ್ಲಿ ಶಾಲೆಯ ಮೇಲೆ ರಶ್ಯಾ ಬಾಂಬ್ ದಾಳಿ: ಇಬ್ಬರು ಮೃತ್ಯು; ಇತರ 60 ಮಂದಿ ಸಾವಿನ ಶಂಕೆ

photo:twitter
ಕೀವ್, ಮೇ 8: ಪೂರ್ವ ಉಕ್ರೇನ್ ನ ಬಿಲೊಹೊರ್ವಿಕಾ ಗ್ರಾಮದಲ್ಲಿನ ಶಾಲೆಯೊಂದರ ಮೇಲೆ ರಶ್ಯ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕುಸಿದು ಬಿದ್ದ ಶಾಲಾ ಕಟ್ಟಡದ ಅವಶೇಷಗಳಡಿ ಇನ್ನೂ ಕನಿಷ್ಟ 60 ಮಂದಿ ಸಿಲುಕಿದ್ದು ಅವರೆಲ್ಲಾ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಲುಷಾಂಕ್ ವಲಯದ ಗವರ್ನರ್ ಸೆಹ್ರಿಯ್ ಗೈದಾಯ್ ರವಿವಾರ ಹೇಳಿದ್ದಾರೆ.
ಈ ಶಾಲೆಯಲ್ಲಿ ಸುಮಾರು 90 ಮಂದಿ ಆಶ್ರಯ ಪಡೆದಿದ್ದರು. ಶನಿವಾರ ಮಧ್ಯಾಹ್ನ ರಶ್ಯದ ಸೇನೆ ಶಾಲೆಯ ಮೇಲೆ ಬಾಂಬ್ ಹಾಕಿದ್ದು ಇದರಿಂದ ಉಂಟಾದ ಬೆಂಕಿ ಕಟ್ಟಡಕ್ಕೆ ಆವರಿಸಿದೆ. ಸುಮಾರು 4 ಗಂಟೆಯ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸಿ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿದಾಗ 2 ಮೃತದೇಹ ಪತ್ತೆಯಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಲ್ಲಿಂದ 30 ಮಂದಿಯನ್ನು ಸ್ಥಳಾಂತರಿಸಲಾಗಿದ್ದು ಇವರಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದೊಳಗೆ ರಾಶಿಬಿದ್ದಿರುವ ಅವಶೇಷಗಳಡಿ ಉಳಿದ 60 ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಗೈದಾಯ್ ಹೇಳಿದ್ದಾರೆ.
ರಶ್ಯ ಸೇನೆ ನಾಗರಿಕರನ್ನು ಮತ್ತು ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು ಇದು ಯುದ್ಧಾಪರಾಧವಾಗಿದೆ ಎಂದು ಉಕ್ರೇನ್ ಹಾಗೂ ಪಾಶ್ಚಿಮಾತ್ಯ ದೇಶಗಳು ಆರೋಪಿಸುತ್ತಿವೆ. ಆದರೆ ರಶ್ಯ ಇದನ್ನು ನಿರಾಕರಿಸುತ್ತಿದೆ.
ಈ ಮಧ್ಯೆ, ರವಿವಾರ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಗೆ ವೀಡಿಯೊ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಇತರ ಜಿ7 ಮುಖಂಡರು, ಉಕ್ರೇನ್ಗೆ ಇನ್ನಷ್ಟು ಮಿಲಿಟರಿ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಪುಟಿನ್ ಅವರ ಕ್ರೂರ ಆಕ್ರಮಣವು ಉಕ್ರೇನ್ನಲ್ಲಿ ಅಪಾರ ವಿನಾಶದ ಜೊತೆಗೆ, ಯುರೋಪ್ನಾದ್ಯಂತ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡಿದೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.







