ಸಮಕಾಲೀನಕತೆಗೆ ಸ್ಪಂದಿಸುವುದು ಸಾಹಿತಿಗಳ ಹೊಣೆ: ಚ.ಹ.ರಘುನಾಥ
ಬೆಂಗಳೂರು, ಮೇ 8: ಸಮಕಾಲೀನಕತೆಗೆ ಸ್ಪಂದಿಸುವುದು ಸಾಹಿತಿಗಳ ಸಾಮಾಜಿಕ ಹೊಣೆಗಾರಿಕೆ ಆಗಿದೆ. ಸಮಕಾಲೀನತೆಯನ್ನು ಕಾದಂಬರಿ ಅಥವಾ ಕವಿತೆಗಳಲ್ಲಿ ಕಟ್ಟಿಕೊಡುವುದಕ್ಕಿಂತ ಕಥೆಗಳಲ್ಲಿ ಕಟ್ಟಿಕೊಡುವುದು ಸುಲಭ ಎಂದು ಲೇಖಕ ಚ.ಹ.ರಘುನಾಥ ಅಭಿಪ್ರಾಯಪಟ್ಟರು.
ರವಿವಾರ ವಂಶಿ ಪಬ್ಲಿಕೇಷನ್ಸ್ ವತಿಯಿಂದ ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾದಂಬರಿಯಲ್ಲಿ ಬಹುತೇಕ ವೇಳೆ ವಸ್ತುವು ವಾಚ್ಯವಾಗುವ ಹಾಗೂ ಕಾವ್ಯದಲ್ಲಿ ಸೂಚ್ಯವಾಗುವ ಸಾಧ್ಯತೆ ಇದೆ. ಆದರೆ, ಕಥೆಯು ಸಮಕಾಲೀಕತೆಯನ್ನು ಸೂಕ್ತ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿತ ‘ಜಾಲ’ ಹಾಗೂ ‘ಮೌನಸಾಕ್ಷಿ’ ಕಥಾ ಸಂಕಲನದ ಬಹುತೇಕ ಕಥೆಗಳು ರೂಪಕಗಳ ಅನುಭವವನ್ನು ಸೃಷ್ಟಿಸುವಷ್ಟು ಸಶಕ್ತವಾಗಿದೆ. ಈ ಕಥೆಗಳ ಅನುವಾದವೂ ಓದುಗ ಸ್ನೇಹಿಯಾಗಿವೆ’ ಎಂದು ಅಭಿಪ್ರಾಯಪಟ್ಟರು.
ಲೇಖಕ ಪೆದ್ದಂಟಿ ಅಶೋಕ್ ಕುಮಾರ್ ಮಾತನಾಡಿ, ‘ಕನ್ನಡ-ತೆಲುಗು ಭಾಷೆಗಳು ಅನ್ಯೋನ್ಯತೆಯನ್ನು ಹೊಂದಿವೆ. ಎರಡೂ ಭಾಷೆಗಳಲ್ಲಿಯ ಉತ್ತಮ ಸಾಹಿತ್ಯಗಳನ್ನು ಪರಸ್ಪರ ಅನುವಾದಕ್ಕೆ ಒಳಪಡಿಸಬೇಕು. ಕಥೆಗಾರನಿಗೆ ಒಂದು ಹೃದಯವಿದ್ದರೆ, ಅನುವಾದಕರಿಗೆ ಎರಡು ಹೃದಯಗಳಿರುತ್ತವೆ. ನೀರು, ಗಾಳಿ ವ್ಯಾಪಾರೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಜನರು ಚಳವಳಿಯ ರೂಪದಲ್ಲಿ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇರುವುದನ್ನು ‘ಜಾಲ’ ಕಥೆಗಳ ಮೂಲ ಅಂಶಗಳಾಗಿವೆ’ ಎಂದು ಅವರು ಹೇಳಿದರು.
ಲೇಖಕಿ ಆರ್. ಪೂರ್ಣಿಮಾ ಮಾತನಾಡಿ, ‘ಸಮಾಜಕ್ಕೆ ಉಪಯೋಗವಾಗಬಲ್ಲ, ಜನಹಿತಾಸಕ್ತಿ ಕಾಪಾಡಬಲ್ಲ ಸಾಹಿತ್ಯ ಯಾವುದೇ ಭಾಷೆಯಲ್ಲಿರಲಿ ಅದನ್ನು ತಮ್ಮತಮ್ಮ ಭಾಷೆಗಳಲ್ಲಿ ಅನುವಾದಿಸುವ ಹಂಬಲ ಅನುವಾದಕರಿಗಿರಬೇಕು’ ಎಂದು ಸಲಹೆ ನೀಡಿದರು. ಲೇಖಕಿ ಎಂ.ಜಿ.ಶುಭಮಂಗಳ ಅವರ ‘ಜಾಲ’ ಹಾಗೂ ‘ಮೌನಸಾಕ್ಷಿ’ ಎಂಬ ಅನುವಾದಿತ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಸೈಯ್ಯದ್ ಪಾಷಾ, ವಾಸುದೇವ ನಾಡಿಗ್ ಉಪಸ್ಥಿತರಿದ್ದರು.







