26 ಬಾರಿ ಎವರೆಸ್ಟ್ ಶಿಖರಾರೋಹಣ: ವಿಶ್ವದಾಖಲೆ ಬರೆದ ನೇಪಾಳದ ಶೆರ್ಪ

PHOTO:TWITTER
ಕಠ್ಮಂಡು, ಮೇ 6: ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು 26 ಬಾರಿ ಏರುವ ಮೂಲಕ ತಾನು ಕಳೆದ ವರ್ಷ ನಿರ್ಮಿಸಿದ್ದ ದಾಖಲೆಯನ್ನು ನೇಪಾಳದ ಕಮಿರಿತ ಶೆರ್ಪ ಮುರಿದು ಹೊಸ ದಾಖಲೆ ಬರೆದಿದ್ದಾರೆ ಎಂದು ವರದಿಯಾಗಿದೆ.
ಇತರ 10 ಶೆರ್ಪಾ ಚಾರಣಿಗರ ತಂಡದ ನೇತೃತ್ವ ವಹಿಸಿದ್ದ 52 ವರ್ಷದ ಕಮಿರಿತ ಶೆರ್ಪ, ಶನಿವಾರ ಸಾಂಪ್ರದಾಯಿಕ ಆಗ್ನೇಋ ಪರ್ವತ ಮಾರ್ಗದ ಮೂಲಕ 29,031.69 ಅಡಿ ಎತ್ತರದ ಎವರೆಸ್ಟ್ ಪರ್ವತದ ಶಿಖರವನ್ನು ತಲುಪಿದರು. ಈ ಮೂಲಕ ಅತೀ ಹೆಚ್ಚು ಬಾರಿ ಎವರೆಸ್ಟ್ ಪರ್ವತ ಏರಿದ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸ್ಥಾಪಿಸಿದ್ದಾರೆ ಎಂದು ನೇಪಾಳದ ಪ್ರವಾಸೋದ್ದಿಮೆ ಇಲಾಖೆಯ ಆಡಳಿತ ನಿರ್ದೇಶಕ ತಾರಾನಾಥ್ ಅಧಿಕಾರಿ ಹೇಳಿದ್ದಾರೆ.
ಕಮಿರಿತ ಶೆರ್ಪ ಅನುಸರಿಸುತ್ತಿರುವ ಚಾರಣ ಪಥವನ್ನು 1953ರಲ್ಲಿ ನ್ಯೂಝಿಲ್ಯಾಂಡ್ನ ಎಡ್ಮಂಡ್ ಹಿಲರಿ ಮತ್ತು ಅವರ ಜತೆಗಾರನಾಗಿದ್ದ ನೇಪಾಳದ ಶೆರ್ಪ ತೇನ್ಸಿಂಗ್ ನಾರ್ಗೆ ಪ್ರಥಮ ಬಾರಿಗೆ ಅನುಸರಿಸಿದ್ದು ಬಳಿಕ ಜನಪ್ರಿಯವಾಗಿದೆ. 1953ರಲ್ಲಿ ಹಿಲರಿ ಮತ್ತು ತೇನ್ಸಿಂಗ್ ಜೋಡಿ ಪ್ರಥಮ ಬಾರಿ ಎವರೆಸ್ಟ್ ಪರ್ವತದ ಶಿಖರ ತಲುಪಿದಂದಿನಿಂದ ಇದುವರೆಗೆ 10,657 ಬಾರಿ ಎವರೆಸ್ಟ್ ಶಿಖರದ ತುದಿಯನ್ನು ತಲುಪಲಾಗಿದೆ . ಅಲ್ಲದೆ 311 ಪರ್ವತಾರೋಹಿಗಳು ಮೃತಪಟ್ಟಿರುವುದಾಗಿ ನೇಪಾಳ ಸರಕಾರದ ವರದಿ ಹೇಳಿದೆ.







