ಉಕ್ರೇನ್ ಅಧ್ಯಕ್ಷರ ಪ್ರಸಿದ್ಧ ಕೋಟ್ 1,10,000 ಡಾಲರ್ಗೆ ಹರಾಜು
ಉಕ್ರೇನ್ ರಾಯಭಾರಿ ಕಚೇರಿಯಿಂದ ನಿಧಿ ಸಂಗ್ರಹಣೆಗೆ ಹರಾಜು ಪ್ರಕ್ರಿಯೆ

PHOTO:TWITTER
ಲಂಡನ್, ಮೇ 8: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರ ಪ್ರಸಿದ್ಧ ಖಾಕಿ ತುಪ್ಪಟದ ಕೋಟ್ (ಅಂಗಿ) ಇಂಗ್ಲೆಂಡಿನಲ್ಲಿ ನಿಧಿ ಸಂಗ್ರಹಣೆಗೆ ನಡೆದ ಹರಾಜಿನಲ್ಲಿ 1,10,000 ಡಾಲರ್ ಗೆ ಹರಾಜಾಗಿದೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.
ಲಂಡನ್ನ ಟೇಟ್ ಮೊಡರ್ನ್ನಲ್ಲಿ ಉಕ್ರೇನ್ನ ರಾಯಭಾರಿ ಕಚೇರಿ ಆಯೋಜಿಸಿದ್ದ ನಿಧಿ ಸಂಗ್ರಹಣೆ ಹರಾಜು ಪ್ರಕ್ರಿಯೆಯಲ್ಲಿ ಝೆಲೆನ್ಸ್ಕಿ ಅವರು ಧರಿಸುತ್ತಿದ್ದ ಖಾಕಿ ತುಪ್ಪಟ ಆಕರ್ಷಣೆಯ ಕೇಂದ್ರವಾಗಿತ್ತು. ಈ ದಿರಿಸಿಗೆ ಆರಂಭದಲ್ಲಿ 50,000 ಪೌಂಡ್ ದರ ನಿಗದಿಯಾಗಿತ್ತು. ಆದರೆ ಗರಿಷ್ಟ ಮೊತ್ತ ಬಿಡ್ ಮಾಡುವಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಖರೀದಿಗಾರರಲ್ಲಿ ವಿನಂತಿಸಿದ ಬಳಿಕ 90,000 ಪೌಂಡ್(1,10,000 ಡಾಲರ್)ಗೆ ಹರಾಜಾಗಿದೆ. ಉಕ್ರೇನ್ ಅನ್ನು ಬೆಂಬಲಿಸಿ ನನ್ನ ಮಿತ್ರರೇ, ಈ ಮೂಲಕ ಪುರಾತನ ಯುರೋಪ್ನ ಮಹಾನ್ ನಗರ ಕೀವ್ಗೆ ಮತ್ತೆ ಬೆದರಿಕೆ ಎದುರಾಗದಂತೆ, ಉಕ್ರೇನ್ ಮತ್ತೆ ಸಂಪೂರ್ಣ ಮುಕ್ತವಾಗುವಂತೆ ನೆರವಾಗಿ ಎಂದು ಜಾನ್ಸನ್ ಕರೆ ನೀಡಿದರು ಎಂದು ವರದಿಯಾಗಿದೆ.
ಸದಾ ಹಸಿರು ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ಝೆಲೆನ್ಸ್ಕಿ, ಪ್ರವಾಸದ ಸಂದರ್ಭ ಖಾಕಿ ತುಪ್ಪಟದ ನಿಲುವಂಗಿ ಧರಿಸುತ್ತಾರೆ. ಬ್ರಿಟನ್ ಪ್ರಧಾನಿ ಜಾನ್ಸನ್ಗೆ ಉಕ್ರೇನ್ ಅಧ್ಯಕ್ಷರು ಉಡುಗೊರೆ ನೀಡಿದ್ದ ಆಕರ್ಷಕ ವಿನ್ಯಾಸದ ಜಗ್ ಕೂಡಾ ಹರಾಜಿನಲ್ಲಿ ಅಧಿಕ ಬೆಲೆಗೆ ಮಾರಾಟವಾಗಿದೆ.





