ಟಿ.ವಿ. ಪತ್ರಕರ್ತ ಅಮನ್ ಚೋಪ್ರಾರನ್ನು ಬಂಧಿಸಲು ನೋಯ್ಡಾ ತಲುಪಿದ ರಾಜಸ್ಥಾನ ಪೊಲೀಸರ ತಂಡ

ಜೈಪುರ, ಮೇ 8: ವಿಭಿನ್ನ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಪ್ರಕರಣದಲ್ಲಿ ಟಿ.ವಿ. ಪತ್ರಕರ್ತ ಅಮನ್ ಚೋಪ್ರಾ ಅವರನ್ನು ಬಂಧಿಸಲು ರಾಜಸ್ಥಾನದ ಪೊಲೀಸರ ತಂಡ ಉತ್ತರಪ್ರದೇಶದ ನೋಯ್ಡಾಕ್ಕೆ ತೆರಳಿದೆ.
ದಿಲ್ಲಿಯ ಜಹಾಂಗಿರ್ಪುರಿ ಧ್ವಂಸ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಪ್ರತೀಕಾರದ ಕ್ರಮವಾಗಿ ರಾಜಸ್ಥಾನ ಸರಕಾರ ಅಲ್ವಾರ್ ಜಿಲ್ಲೆಯ ರಾಜಗಢದಲ್ಲಿರುವ ದೇವಾಲಯವನ್ನು ಧ್ವಂಸಗೊಳಿಸಿದೆ ಎಂದು ಪ್ರದರ್ಶಿಸುವ ಸುಳ್ಳು ಹಾಗೂ ಕಾಲ್ಪನಿಕ ವಿವರಗಳನ್ನು ಪತ್ರಕರ್ತ ನೀಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಚೋಪ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಡುಂಗಾರ್ಪುರದ ಕೊಟ್ವಾಲಿ ಪೊಲೀಸ್ ಠಾಣೆ ತಿಳಿಸಿದೆ.
ದೇಶದ್ರೋಹ, ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವುದು, ಎರಡು ಗುಂಪುಗಳ ನಡುವೆ ದ್ವೇಷ ಉತ್ತೇಜನಕ್ಕೆ ಸಂಬಂಧಿಸಿದ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಎಪ್ರಿಲ್ 23ರಂದು ಬುಂಡಿ, ಅಲ್ವಾರ್ ಹಾಗೂ ಡುಂಗಾರ್ಪುರ ಜಿಲ್ಲೆಗಳಲ್ಲಿ ಚೋಪ್ರಾ ವಿರುದ್ಧ 3 ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
ಬುಂಡಿ ಹಾಗೂ ಆಲ್ವಾರ್ ಜಿಲ್ಲೆಗಳಲ್ಲಿ ತನ್ನ ವಿರುದ್ಧ ದಾಖಲಿಸಲಾದ ಎರಡು ಎಫ್ಐಆರ್ಗೆ ಸಂಬಂಧಿಸಿದ ಬಂಧನಾದೇಶಕ್ಕೆ ಚೋಪ್ರಾ ಅವರು ರಾಜಸ್ಥಾನ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿ ತಡೆ ತಂದಿದ್ದಾರೆ. ಆದರೆ, ಡುಂಗಾರ್ಪುರ ಜಿಲ್ಲೆಯಲ್ಲಿರುವ ಸ್ಥಳೀಯ ನ್ಯಾಯಾಲಯ ಜಾರಿಗೊಳಿಸಿದ ಬಂಧನಾದೇಶವನ್ನು ಅವರು ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ನಮ್ಮ ತಂಡ ನೋಯ್ಡದಲ್ಲಿ ಬೀಡು ಬಿಟ್ಟಿದೆ. ಅವರನ್ನು ಬಂಧಿಸಲು ಸಾಧ್ಯತೆ ಇರುವ ಎಲ್ಲ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ನಿನ್ನೆ ಕೂಡ ನಮ್ಮ ತಂಡ ಚೋಪ್ರಾ ಅವರ ನಿವಾಸಕ್ಕೆ ತೆರಳಿತ್ತು. ಆದರೆ, ಅವರು ಅಲ್ಲಿ ಇರಲಿಲ್ಲ. ಅವರ ನಿವಾಸಕ್ಕೆ ಬೀಗ ಹಾಕಲಾಗಿತ್ತು’’ ಎಂದು ಡುಂಗಾರ್ಪುರದ ಪೊಲೀಸ್ ಅಧೀಕ್ಷಕ ಸುಧೀರ್ ಜೋಷಿ ಅವರು ತಿಳಿಸಿದ್ದಾರೆ.