ಅಸನಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ: ಆಂಧ್ರ,ಒಡಿಶಾ,ಬಂಗಾಳಗಳಲ್ಲಿ ಕಟ್ಟೆಚ್ಚರ ಘೋಷಣೆ

ಹೊಸದಿಲ್ಲಿ,ಮೇ 8: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಅಸನಿ ಚಂಡಮಾರುತವು ವಾಯುವ್ಯದತ್ತ ಚಲಿಸುತ್ತಿದ್ದು,ಮುಂದಿನ 12 ಗಂಟೆಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ರವಿವಾರ ತಿಳಿಸಿದೆ.
ಅಸನಿ ಚಂಡಮಾರುತವು ಪ್ರತಿ ಗಂಟೆಗೆ 13 ಕಿ.ಮೀ.ವೇಗದಲ್ಲಿ ವಾಯುವ್ಯ ದಿಕ್ಕಿನಲ್ಲಿ ಸಾಗುತ್ತಿದ್ದು,ರವಿವಾರ ಬೆಳಿಗ್ಗೆ 8:30 ಗಂಟೆಗೆ ಕಾರ್ ನಿಕೋಬಾರ್ನ ಪಶ್ಚಿಮ-ವಾಯುವ್ಯದಲ್ಲಿ ಸುಮಾರು 480 ಕಿ.ಮೀ.,ಪೋರ್ಟ್ ಬ್ಲೇರ್ನ ಪಶ್ಚಿಮಕ್ಕೆ 400 ಕಿ.ಮೀ.,ವಿಶಾಖಪಟ್ಟಣ (ಆಂಧ್ರಪ್ರದೇಶ)ದ ಆಗ್ನೇಯಕ್ಕೆ 940 ಕಿ.ಮೀ. ಮತ್ತು ಪುರಿ (ಒಡಿಶಾ)ಯ ಆಗ್ನೇಯಕ್ಕೆ 1,000 ಕಿ.ಮೀ.ದೂರದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಸಾನಿ ಚಂಡಮಾರುತವು ಮೇ 10ರ ಸಂಜೆಯವರೆಗೆ ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಮತ್ತು ಉತ್ತರ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಯಾಚೆ ಬಂಗಾಳ ಕೊಲ್ಲಿಯ ಪಶ್ಚಿಮ ಮಧ್ಯ ಮತ್ತು ನೆರೆಯ ವಾಯುವ್ಯವನ್ನು ತಲುಪುವ ಹೆಚ್ಚಿನ ಸಾಧ್ಯತೆಯಿದೆ. ಬಳಿಕ ಅದು ಉತ್ತರ-ವಾಯುವ್ಯದತ್ತ ತಿರುವು ಪಡೆದುಕೊಂಡು ಒಡಿಶಾ ಕರಾವಳಿಯಾಚೆ ಬಂಗಾಳ ಕೊಲ್ಲಿಯ ವಾಯುವ್ಯದತ್ತ ಚಲಿಸಲಿದೆ ಎಂದು ಆಂಧ್ರದ ಆಮರಾವತಿಯ ಹವಾಮಾನ ಕೇಂದ್ರವು ಹೇಳಿದೆ.
ಪರಿಸ್ಥಿತಿಯನ್ನು ಎದುರಿಸಲು ಒಡಿಶಾ ಮತ್ತು ಪ.ಬಂಗಾಳ ಸರಕಾರಗಳು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ.
ಈ ನಡುವೆ ಮೇ 12ರವರೆಗೆ ಬಂಗಾಳ ಕೊಲ್ಲಿ ಮತ್ತು ಪಕ್ಕದ ಅಂಡಮಾನ್ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಮತ್ತು ಈಗಾಗಲೇ ಸಮುದ್ರದಲ್ಲಿರುವ ಮೀನುಗಾರರಿಗೆ ದಡಕ್ಕೆ ವಾಪಸಾಗುವಂತೆ ಎಚ್ಚರಿಕೆ ನೀಡಲಾಗಿದೆ.ಅಸನಿ ಚಂಡಮಾರುತದ ನಿರ್ವಹಣೆಯು ಹೆಚ್ಚಿನ ಗಮನವನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮೇ 10ರಿಂದ 12ರವರೆಗೆ ನಡೆಯಲಿದ್ದ ಜಿಲ್ಲಾಡಳಿತಗಳೊಂದಿಗಿನ ತನ್ನ ಸಭೆಗಳನ್ನು ಮುಂದೂಡಿದ್ದಾರೆ.







