ಮಾಧ್ಯಮಗಳ ಮೂಲಕ ನಾನು ನಾಯಕನಾದೆ: ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್

ಮೈಸೂರು: 1970ರಿಂದ ನನ್ನ ಎಲ್ಲ ರಾಜಕೀಯ ಏಳು ಬೀಳುಗಳಲ್ಲಿ ಮಾಧ್ಯಮಗಳು ನನ್ನ ಜತೆಯಾಗಿವೆ. ನಾನು ನಾಯಕನಾದುದ್ದು ಮಾಧ್ಯಮಗಳಿಂದ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸಹಯೋಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಅಡಗೂರು ಎಚ್.ವಿಶ್ವನಾಥ್ 75 ರ ಸಂಭ್ರಮ “ಮಾಧ್ಯಮ ಮೈತ್ರಿಯಾನ” 1970-2022 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
'ನನ್ನ ವಿದ್ಯಾರ್ಥಿ ಹೋರಾಟದಿಂದಲೂ ನನಗೆ ಹಲವಾರು ಪತ್ರಕರ್ತರು ಮಾರ್ಗದರ್ಶನ ಮಾಡಿದ್ದಾರೆ. ನಾನು ಹೇಗೆ ಪತ್ರಿಕಾಗೋಷ್ಠಿ ಮಾಡಬೇಕು, ಮತ್ತು ಹೇಗೆ ಮಾತನಾಡಬೇಕು ಎಂದು ಹೇಳಿಕೊಟ್ಟರು. ಆ ಕಾರಣದಿಂದಲೇ ನಾನು ಇಂದು ನಾಯಕನಾಗಿ ಹೊರ ಹೊಮ್ಮಿದ್ದೇನೆ' ಎಂದರು.
'ನಾನು ಸುಮಾರು 50 ವರ್ಷಗಳಿಂದಲೂ ಮಾಧ್ಯಮದ ಜೊತೆಗೆ ಬಂದಿದ್ದೇನೆ. ಆದರೆ, ಇಂದು ಮಾಧ್ಯಮಗಳ ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ನೋಡಿದರೆ ಮತ್ತು ಅವರು ನಡೆದುಕೊಳ್ಳುವುದನ್ನು ನೋಡಿದರೆ 1980ರಲ್ಲಿ ಗುಂಡೂರಾವ್ ಹೇಳಿದ್ದ `ಮಾಧ್ಯಮಗಳನ್ನು ಅರಬ್ಬಿ ಸಮುದ್ರಕ್ಕೆ ಎಸೆಯಿರಿ? ಎಂಬ ಮಾತು ಸತ್ಯವಾದುದು ಎಂದೆನಿಸಿದೆ' ಎಂದು ಹೇಳಿದರು.





