ತಾಯಂದಿರ ದಿನದ ಪ್ರಯುಕ್ತ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಆನಂದ್ ಮಹಿಂದ್ರಾರಿಂದ ನೂತನ ಮನೆ ಉಡುಗೊರೆ

ಹೊಸದಿಲ್ಲಿ, ಮೇ 8: ತಾಯಂದಿರ ದಿನವಾದ ರವಿವಾರ ಉದ್ಯಮಿ ಆನಂದ್ ಮಹಿಂದ್ರಾ ಅವರು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮನೆಯಲ್ಲೇ ತಯಾರಿಸಿದ ಜನಪ್ರಿಯ ಆಹಾರವನ್ನು ಜನರಿಗೆ ಪೂರೈಸಲು ಇಡ್ಲಿ ಅಮ್ಮ ಶೀಘ್ರ ತನ್ನ ಸ್ವಂತ ಮನೆ ಹೊಂದಲಿದ್ದಾರೆ ಎಂದು ಸೂಚಿಸುವ 2021 ಎಪ್ರಿಲ್ನ ತನ್ನ ಟ್ವೀಟ್ ಅನ್ನು ಮಹಿಂದ್ರಾ ಅವರು ಇಂದು ಮತ್ತೆ ಶೇರ್ ಮಾಡಿದ್ದಾರೆ.
ತಾಯಂದಿರ ದಿನವಾದ ಇಂದು ಇಡ್ಲಿ ಅಮ್ಮಾ ತನ್ನ ನೂತನ ನಿವಾಸಕ್ಕೆ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.
ಅಲ್ಲದೆ, ‘‘ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಉಡುಗೊರೆಯಾಗಿ ನೀಡಲು ಸಕಾಲದಲ್ಲಿ ಮನೆ ನಿರ್ಮಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ನಮ್ಮ ತಂಡಕ್ಕೆ ಕೃತಜ್ಞತೆಗಳು. ಅವರು ತಾಯಿಯ ಸದ್ಗುಣಗಳ ಸಾಕಾರ. ಪೋಷಣೆ, ಕಾಳಜಿ ಮತ್ತು ನಿಸ್ವಾರ್ಥತೆ ಅವರಲ್ಲಿದೆ. ಇದು ಅವರು ಹಾಗೂ ಅವರ ಕೆಲಸಕ್ಕೆ ಬೆಂಬಲ ನೀಡಲು ದೊರಕಿದ ಒಂದು ಸುವರ್ಣಾವಕಾಶ. ನಿಮಗೆಲ್ಲರಿಗೂ ತಾಯಂದಿರ ದಿನದ ಶುಭಾಷಯಗಳು’’ ಎಂದು ಅವರು ಕ್ಯಾಪ್ಶನ್ ಹಾಕಿದ್ದಾರೆ.
ಕಮಲಾತಲ್ ಅವರು ಇಡ್ಲಿ ಅಮ್ಮಾ ಎಂದೇ ಜನಪ್ರಿಯ. ಅವರು ತಮಿಳುನಾಡಿನ ಪೆರು ಸಮೀಪದ ವಾಡಿವೇಳಂಪಾಲಯಂ ಗ್ರಾಮದ ನಿವಾಸಿ. ಕಳೆದ 37 ವರ್ಷಗಳಿಂದ 1 ರೂಪಾಯಿಗೆ ಇಡ್ಲಿ ಸಾಂಬಾರ್ ಹಾಗೂ ಚಟ್ನಿ ವಿತರಿಸುತ್ತಿದ್ದಾರೆ.
ಇವರ ಕಥೆ 2019ರಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಹಿಂದ್ರಾ ಅವರು ಕಮಲಾತಲ್ ಗೆ ಬೆಂಬಲ ಸೂಚಿಸಿದ್ದರು. ಅಲ್ಲದೆ, ತಾನು ಅವರ ಉದ್ಯಮದಲ್ಲಿ ಹೂಡಿಕೆ ಮಾಡಲು ಸಂತೋಷ ಪಡುತ್ತೇನೆ ಎಂದಿದ್ದರು.







