ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ, ರಾಜ್ಯವನ್ನು ಆಳುವವರು ಸರ್ವ ಧರ್ಮ ಸಹಿಷ್ಣುಗಳಾಗಿರಬೇಕು: ವೀರಪ್ಪ ಮೊಯ್ಲಿ

ಮೈಸೂರು,ಮೇ.8: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ಹಾಗೂ ರಾಜ್ಯವನ್ನು ಆಳುವವರು ಸರ್ವ ಧರ್ಮ ಸಹಿಷ್ಣುಗಳಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಅಭಿಪ್ರಾಯಪಟ್ಟರು.
ನಗರದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ರವಿವಾರ ನಡೆದ ಅಡಗೂರು ಎಚ್.ವಿಶ್ವನಾಥ್ 75ರ ಸಂಭ್ರಮ ಕಾರ್ಯಕ್ರಮದಲ್ಲಿ “ವಿಶ್ವಾಕ್ಷರ ಪಯಣ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಪ್ರಜಾಪ್ರಭುತ್ವದ ಮೌಲ್ಯ ನಿಂತಿರುವುದು ಬಹುಸಂಸ್ಕೃತಿಯ ಮೇಲೆ ಹೊರತು ಏಕ ಸಂಸ್ಕೃತಿಯ ಮೇಲೆ ಅಲ್ಲ. ಪ್ರಜಾಪ್ರಭುತ್ವದ ಬುನಾದಿ ಉತ್ತಮವಾಗಿ ಇರಬೇಕು ಎಂದರೆ ಸೌಹಾರ್ದಪೂರಕ ವಾತಾವರಣವಿರಬೇಕು ಎಂದ ಮೊಯ್ಲಿ ಅವರು, 2ನೇ ಶತಮಾನದಿಂದ 15ನೇ ಶತಮಾನದವರೆಗೆ ಕರುನಾಡನ್ನು ಆಳಿದ ರಾಜಮನೆತನಗಳಲ್ಲಿ ಬಹುಪಾಲು ಜೈನರೇ ಹೆಚ್ಚಾಗಿದ್ದರು. ಆದರೆ ಅವರು ಸರ್ವಧರ್ಮ ಸಹಿಷ್ಣುಗಳಾಗಿದ್ದರಿಂದ ರಾಜ್ಯವಾಳಲು ಸಾಧ್ಯವಾಯಿತು ಎಂದು ವಿಶ್ಲೇಷಣೆ ಮಾಡಿದರು.
ಆಳ್ವಿಕೆ ಮಾಡುವವರು ಆತ್ಮರತಿ ಮಾಡಿಕೊಳ್ಳುವುದನ್ನು ಬಿಟ್ಟು ಹೊಸತನದ ಅನ್ವೇಷಣೆಗೆ ಪೂರಕವಾಗಿ ಕೆಲಸಮಾಡಬೇಕು. ಸರ್ವರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಮಹಾಕವಿ ಪಂಪ ಮುಂತಾದ ಕವಿಗಳ ಕಾವ್ಯಗಳಲ್ಲಿ ಇರುವ ಆಶಯದಂತೆ ರಾಜ್ಯಭಾರ ಮಾಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಮಾತನಾಡಿ, ಹಾವೇರಿಯಲ್ಲಿ ನಡೆಯುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈದ್ಯಕೀಯ ಸಾಹಿತ್ಯ, ಕ್ರೀಡಾ ಸಾಹಿತ್ಯ, ಕಾನೂನು ಸಾಹಿತ್ಯ, ಯಕ್ಷಗಾನ ಸಾಹಿತ್ಯ ಕುರಿತು ಗೋಷ್ಠಿಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗುತ್ತದೆ. ವಿದೇಶದಲ್ಲಿ 100 ಜನ ಕನ್ನಡಿಗರು ಸೇರಿ ಒಂದು ಘಟಕ ಸ್ಥಾಪನೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದವರಿಗೆ ಉಚಿತವಾಗಿ ಸದಸ್ಯತ್ವ ನೀಡಲಾಗುತ್ತದೆ. ದಿವ್ಯಾಂಗರಿಗೂ ಉಚಿತ ಸದಸ್ಯತ್ವ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ವಹಿಸಿದ್ದರು. ಎ.ಎಚ್.ವಿಶ್ವನಾಥ್ ಅವರು ಬರೆದಿರುವ ಕೃತಿಗಳನ್ನು ಕುರಿತು ಡಾ.ಸಿ.ಎಸ್.ದ್ವಾರಕಾನಾಥ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಸಿಪಿಕೆ, ವಸುಧೇಂದ್ರ, ಡಾ.ಶುಭದಾ ಪ್ರಸಾದ್ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ವೈ.ಡಿ.ರಾಜಣ್ಣ ಸ್ವಾಗತಿಸಿದರು. ರಾಜಶೇಖರ ಕದಂಬ ನಿರೂಪಿಸಿದರು.







