ಗ್ರಾಹಕರ ನಂಬಿಕೆ, ವಿಶ್ವಾಸಗಳಿಕೆಯಿಂದ ಬ್ಯಾಂಕ್‍ನ ಪ್ರಗತಿ: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ

ಮಂಗಳೂರು: ಗ್ರಾಹಕರ ನಂಬಿಕೆ, ವಿಶ್ವಾಸಕ್ಕೆ ಪಾತ್ರ ವಾದರೆ ಮಾತ್ರ ಒಂದು ಬ್ಯಾಂಕ್‍ನ ಪ್ರಗತಿಯ ಯನ್ನು ಸಾಧಿಸಲು ಸಾಧ್ಯ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಹೇಳಿದರು.
ಅವರು ರವಿವಾರ ನಗರದ ಹಂಪನಕಟ್ಟೆಯಲ್ಲಿರುವ ಎಂಸಿಸಿ ಬ್ಯಾಂಕ್ ಕಚೇರಿಯ ಪಿಎಫ್‍ಎಕ್ಸ್ ಸಲ್ಡಾನ ಸಭಾಂಗಣದಲ್ಲಿ ಸ್ಥಾಪಕರ ದಿನದ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಗ್ರಾಹಕ ಸ್ನೇಹಿ ಬ್ಯಾಂಕ್ ನ ವ್ಯವಹಾರ ಇರಬೇಕು. ಬ್ಯಾಂಕಿನ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡ ಪರಿಣಾಮ ಎಂಸಿಸಿ ಬ್ಯಾಂಕ್ 110 ವರ್ಷಗಳನ್ನು ಪೂರೈಸಿಕೊಂಡು ಮುಂದೆ ಸಾಗುತ್ತಿದೆ. ಬ್ಯಾಂಕಿನ ಸಂಸ್ಥಾಪಕ ಪಿಎಫ್‍ಎಕ್ಸ್ ಸಲ್ಡಾನ ಅವರ ದೂರದೃಷ್ಟಿತ್ವದ ಫಲವಾಗಿ 110 ವರ್ಷಗಳಲ್ಲಿ ಬ್ಯಾಂಕಿನ ವಿವಿಧ ಅಧ್ಯಕ್ಷರು, ಸಿಬ್ಬಂದಿಗಳಿಂದ ಬ್ಯಾಂಕ್ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಗ್ರಾಹಕರ ವಿಶ್ವಾಸ ಉಳಿಸುವ ಜತೆಯಲ್ಲಿ ಗುಣಮಟ್ಟದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡುವ ಕಾರ್ಯ ನಡೆಯುತ್ತಿದೆ ಎಂದರು.
ಈ ಸಂದರ್ಭ ಎಂಸಿಸಿ ಬ್ಯಾಂಕಿನ ನೂತನ ಪಾರ್ಕಿಂಗ್ ಯಾರ್ಡ್, ಸಂಸ್ಥಾಪಕರ ಕಚೇರಿಯ ದ್ವಾರದಲ್ಲಿ ಪಿ.ಎಫ್.ಎಕ್ಸ್ ಸಲ್ಡಾನ ಭಾವಚಿತ್ರ, ಪಿಎಫ್‍ಎಕ್ಸ್ ಸಲ್ಡಾನ ಮೆಮೋರಿಯಲ್ ಸಭಾಂಗಣ, ಸಿಬ್ಬಂದಿಗಳ ತರಬೇತಿ ಕೇಂದ್ರವನ್ನು ಉದ್ಘಾಟಿಸಲಾಯಿತು.
110 ವರ್ಷಗಳ ಇತಿಹಾಸ ಇರುವ ಎಂಸಿಸಿ ಬ್ಯಾಂಕಿನ ನೂತನ ಲೋಗೋ ಅನಾವರಣವನ್ನು ಪಿ.ಎಫ್.ಎಕ್ಸ್ ಸಲ್ಡಾನ ಅವರ ಮೊಮ್ಮಗ ಹೆರಾಲ್ಡ್ ಆರ್. ಟಿ. ಸಲ್ಡಾನ ಮಾಡಿದರು. ಎಂಸಿಸಿ ಬ್ಯಾಂಕಿನ ಬುಲೆಟಿನ್‍ವನ್ನು ಎಂಸಿಸಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ವೆಲೆಂಟೀನ್ ಡಿಸಿಲ್ವಾ, ಎಂ.ಪಿ. ನೊರೊನ್ಹಾ, ಬ್ಯಾಂಕಿನ ಜನರಲ್ ಮ್ಯಾನೇಜರ್ ಸುನಿಲ್ ಮಸ್ಕರೇನಸ್ ಮೊದಲಾದವರು ಉಪಸ್ಥಿತರಿದ್ದರು. ಶೈನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮೊದಲು ವಿಶೇಷ ಬಲಿಪೂಜೆ ನಡೆಯಿತು. ಮಿಲಾಗ್ರಿಸ್ ಚರ್ಚಿನ ಧರ್ಮಗುರು ಫಾ. ಬೊನವೆಂಚರ್ ನಜರೇತ್ ಅವರು ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು.







