ಪ್ರಧಾನಿ ಮೋದಿ ಅಡಾಲ್ಫ್ ಹಿಟ್ಲರ್‌ನ ಅನುಯಾಯಿ: ಸಂಜಯ್ ರಾವುತ್

ಮುಂಬೈ,ಮೇ 8: ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನನ್ನು ಪ್ರಧಾನಿ ನರೇಂದ್ರ ಮೋದಿಯವರು ‘ಪ್ರೀತಿಸುತ್ತಾರೆ ’ ಮತ್ತು ಆತನನ್ನು ಅನುಸರಿಸುತ್ತಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ ರಾವುತ್ ಅವರು ರವಿವಾರ ಇಲ್ಲಿ ಹೇಳಿದರು.
ಪ್ರಸಕ್ತ ಹಿಟ್ಲರ್ ನನ್ನು ಯಾರಾದರೂ ಹೊಗಳಿದರೆ ಅದು ದೇಶದ್ರೋಹ ಎಂದು ಹೇಳಲಾಗುವುದಿಲ್ಲ ಎಂದು ಟೀಕಿಸಿದರು.
ಶಿವಸೇನೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾವತ್,ಜನಪ್ರಿಯ ನಾಯಕನಾಗಿದ್ದ ಹಿಟ್ಲರ್ ನನ್ನು ಸೇನೆಯ ಸ್ಥಾಪಕ ಬಾಳ ಠಾಕ್ರೆ ಅವರೂ ಮೆಚ್ಚಿಕೊಂಡಿದ್ದರು. ಹಿಟ್ಲರ್ ಹಲವಾರು ಕೆಲಸಗಳನ್ನು ಮಾಡುತ್ತಿದ್ದ ಮತ್ತು ಮೋದಿಯವರೂ ಅದನ್ನೇ ಮಾಡುತ್ತಿದ್ದಾರೆ. ಮೋದಿ ಹಿಟ್ಲರ್ ನನ್ನು ಅನುಸರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ನೋಡಿ. ಹಿಟ್ಲರ್ ಕೆಲಸ ಮಾಡುತ್ತಿದ್ದ ರೀತಿಯಲ್ಲೇ ಮೋದಿ ಮತ್ತು ಅವರ ಪಕ್ಷ ಕೆಲಸ ಮಾಡುತ್ತಿದ್ದಾರೆ. ಹಾಗೆಂದು ತಾನು ಮೋದಿಯವರನ್ನು ಟೀಕಿಸುತ್ತಿಲ್ಲ ಎಂದರು. 1936ರಲ್ಲಿ ಬರ್ಲಿನ್ ಒಲಿಂಪಿಕ್ಸ್‌ನ ಆತಿಥ್ಯವನ್ನು ಜರ್ಮನಿ ವಹಿಸಿಕೊಂಡಿದ್ದನ್ನು ಪ್ರಸ್ತಾಪಿಸಿದ ರಾವುತ್,ಹಿಟ್ಲರ್ ಜನಪ್ರಿಯ ನಾಯಕನಾಗಿದ್ದ,ಆತ ನಂತರದಲ್ಲಿ ಸೋಲನ್ನಪ್ಪಿರಬಹುದು. ಬಾಳ ಠಾಕ್ರೆಯವರು ಆತನನ್ನು ಮೆಚ್ಚಿಕೊಂಡಿದ್ದರು. ಪ್ರಧಾನಿ ಮೋದಿ ಕೂಡ ಆತನನ್ನು ಪ್ರೀತಿಸುತ್ತಾರೆ.
ಹಾಲಿ ಹಿಟ್ಲರ್ ನನ್ನು ಯಾರಾದರೂ ಹೊಗಳಿದರೆ ಅದು ದೇಶದ್ರೋಹವಾಗುವುದಿಲ್ಲ ಎಂದರು.ಹನುಮಾನ್ ಚಾಲೀಸಾ ಪಠಣ ಕುರಿತು ವಿವಾದದಲ್ಲಿ ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಶಾಸಕ ಪತಿ ರವಿ ರಾಣಾ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಿದ್ದಕ್ಕಾಗಿ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರಕಾರ ಟೀಕೆಗಳಿಗೆ ಗುರಿಯಾಗಿರುವುದು ಇಲ್ಲಿ ಗಮನಾರ್ಹವಾಗಿದೆ.