ಉಕ್ರೇನ್ ಗೆ ಹೆಚ್ಚುವರಿ ಮಿಲಿಟರಿ ನೆರವು: ಬ್ರಿಟನ್ ಘೋಷಣೆ

REUTERS
ಲಂಡನ್, ಮೇ 8: ಉಕ್ರೇನ್ಗೆ ಹೆಚ್ಚುವರಿಯಾಗಿ 1.3 ಬಿಲಿಯನ್ ಪೌಂಡ್ ಮಿಲಿಟರಿ ನೆರವು ಹಾಗೂ ಸಹಾಯ ಒದಗಿಸುವುದಾಗಿ ಬ್ರಿಟನ್ ಸರಕಾರ ಹೇಳಿದೆ.
ರವಿವಾರ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಜಿ7 ದೇಶಗಳ ಮುಖಂಡರು , ರಶ್ಯ ವಿರುದ್ಧದ ಯುದ್ಧದಲ್ಲಿ ಉಕ್ರೇನ್ಗೆ ನಿರಂತರ ಸಹಕಾರದ ಭರವಸೆ ನೀಡಿದರು. ಆ ಸಂದರ್ಭ ಬ್ರಿಟನ್ನ ಪ್ರಧಾನಿ ಬೋರಿಸ್ ಜಾನ್ಸನ್, ಉಕ್ರೇನ್ಗೆ ಹೆಚ್ಚುವರಿ ನೆರವಿನ ವಾಗ್ದಾನ ನೀಡಿದರು ಎಂದು ವರದಿಯಾಗಿದೆ. ಬ್ರಿಟನ್, ಕೆನಡಾ, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಜಿ7 ಗುಂಪಿನ ದೇಶಗಳಾಗಿವೆ.
ರಶ್ಯದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಹೋರಾಡುತ್ತಿರುವ ಉಕ್ರೇನ್ನ ಪ್ರಬಲ ಬೆಂಬಲಿಗರಾಗಿರುವ ಜಾನ್ಸನ್, ಉಕ್ರೇನ್ಗೆ ಟ್ಯಾಂಕ್ ವಿರೋಧಿ ಕ್ಷಿಪಣಿ, ವಾಯು ರಕ್ಷಣಾ ವ್ಯವಸ್ಥೆ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ. ಹೆಚ್ಚುವರಿ ನೆರವಿನ ವಾಗ್ದಾನದ ಮೂಲಕ ಉಕ್ರೇನ್ಗೆ ಬ್ರಿಟನ್ ನೀಡುವ ನೆರವು ದುಪ್ಪಟ್ಟಾಗಲಿದ್ದು, ಇರಾಕ್ ಮತ್ತು ಅಫ್ಘಾನ್ ಯುದ್ಧದ ಬಳಿಕ ಸಂಘರ್ಷ ಪೀಡಿತ ದೇಶಕ್ಕೆ ಬ್ರಿಟನ್ ನೀಡುವ ಅತ್ಯಧಿಕ ಶಸ್ತ್ರಾಸ್ತ್ರ ನೆರವು ಇದಾಗಿದೆ. ಪುಟಿನ್ ಅವರ ಕ್ರೂರ ಆಕ್ರಮಣವು ಉಕ್ರೇನ್ನಲ್ಲಿ ಅಪಾರ ವಿನಾಶದ ಜೊತೆಗೆ, ಯುರೋಪ್ನಾದ್ಯಂತ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡಿದೆ ಎಂದು ಜಾನ್ಸನ್ ಹೇಳಿದ್ದಾರೆ. ರಶ್ಯ ಆಕ್ರಮಣ ಆರಂಭವಾದ ಬಳಿಕ ಉಕ್ರೇನ್ನ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಥಮ ವಿದೇಶಿ ಮುಖಂಡರಾಗಿದ್ದಾರೆ ಜಾನ್ಸನ್. ತುರ್ತು ಸಂದರ್ಭಕ್ಕೆ ಮೀಸಲಿಟ್ಟಿರುವ ನಿಧಿಯನ್ನು ಬಳಸಿ ಉಕ್ರೇನ್ಗೆ ಹೆಚ್ಚುವರಿ ನೆರವು ಒದಗಿಸಲಾಗುವುದು ಎಂದು ಜಾನ್ಸನ್ ಹೇಳಿದ್ದಾರೆ.







